ಬೆಂಗಳೂರು: ಬೆಂಗಳೂರಿನ 12ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು ಸಿರಿಯಾ ಹಾಗೂ ಪಾಕಿಸ್ತಾನದಿಂದ ಎಂಬ ಅಂಶ ಪೊಲೀಸರಿಗೆ ತಿಳಿದುಬಂದಿದೆ.
ಏಪ್ರಿಲ್ 8ರಂದು ಮೊದಲಿಗೆ ಹುಸ್ಕೂರು ಬಳಿಯಿರುವ ಎಬನೈಜರ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಹೆಣ್ಣೂರು ಬಳಿ ಇರುವ ಸೈಂಟ್ ವಿನ್ಸೆಂಟ್ ಪಲ್ಲೋಟ್ಟಿ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂಬ ಮಾಹಿತಿ ಲಭಿಸಿತು. ಕೂಡಲೆ ಪೊಲೀಸರು ಶಾಲೆಗಳಿಗೆ ಧಾವಿಸಿ ಮಕ್ಕಳು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳಿಸಿದರು. ಈ ಶಾಲೆಗಳ ಜತೆಗೆ ಮಹದೇವಪುರ, ವರ್ತೂರು, ಹೆಣ್ಣೂರು, ಮಾರತ್ತಹಳ್ಳಿ, ಹೆಬ್ಬಗೋಡಿಯಲ್ಲಿರುವ ಇನ್ನೂ ಅನೇಕ ಶಾಲೆಗಳಿಗೆ ಇಮೇಲ್ ಬಂದಿದೆ ಎಂಬ ಮಾಹಿತಿ ನಂತರ ಲಭಿಸಿತು. ದಿನ ಕಳೆಯುವ ವೇಳೆಗೆ ಈ ಸಂಖ್ಯೆ ಏರುತ್ತಲೇ 12ಕ್ಕೂ ಹೆಚ್ಚು ಶಾಲೆಗಳಿಗೆ ಒಂದೇ ರೀತಿಯ ಸಂದೇಶ ಲಭಿಸಿರುವುದು ತಿಳಿದುಬಂದು ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು.
ಈಮೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಎಲ್ಲ ಶಾಲೆಗಳಿಗೂ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳವನ್ನು ಕಳಿಸಿ ತಪಾಸಣೆ ನಡೆಸಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಶಾಲೆಯಲ್ಲಿ ಬಾಂಬ್ ಸೇರಿ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ. ಬಹುಶಃ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಭಾವಿಸಲಾಗಿತ್ತು.
barons.masarfm@gmail.com ಇಮೇಲ್ ವಿಳಾಸದಿಂದ ಬಂದಿದ್ದ ಸಂದೇಶದಲ್ಲಿ, “ನಿಮ್ಮ ಶಾಲೆಯಲ್ಲಿ ಶಕ್ತಿಯುತ ಬಾಂಬ್ ಅಳವಡಿಸಲಾಗಿದೆ. ಎಚ್ಚರಿಕೆಯಿಂದ ಇರಿ, ಇದು ತಮಾಷೆ ಅಲ್ಲ. ತಕ್ಷಣವೇ ಪೊಲೀಸರನ್ನು ಕರೆಯಿರಿ. ನಿಮ್ಮ ಜೀವವೂ ಸೇರಿ ನೂರಾರು ಜೀವಗಳು ಅಪಾಯಕ್ಕೆ ಸಿಲುಕಬಹುದು. ಇನ್ನು ತಡ ಮಾಡಬೇಡಿ, ಎಲ್ಲವೂ ನಿಮ್ಮ ಕೈಯಲ್ಲೇ ಇದೆ” ಎಂದು ಇಂಗ್ಲಿಷ್‌ನಲ್ಲಿ ತಿಳಿಸಲಾಗಿತ್ತು.
ಈ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಇದೀಗ ಭಯೋತ್ಪಾದನಾ ನಿಗ್ರಹ ದಳ ಈ ತನಿಖೆ ಮುಂದುವರಿಸಿದ್ದು, Proxy Server ಬಳಕೆ ಮಾಡಿ ದುಷ್ಕರ್ಮಿಗಳು ಇಮೇಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಮೇಲ್ ಮೂಲ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಸಿರಿಯಾ ಅಥವಾ ಪಾಕಿಸ್ತಾನದಿಂದ ಇಮೇಲ್ ಬಂದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಸ್ಪಷ್ಟಪಡಿಸಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಭೇಟಿಗೆ 2 ದಿನ ಮುನ್ನ ಜಮ್ಮುವಿನಲ್ಲಿ ಗುಂಡಿನ ಸದ್ದು: ಬಸ್ ಮೇಲೆ ದಾಳಿ
ಈ ಕುರಿತು ಶನಿವಾರ ಬೆಳಗ್ಗೆ ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕುರಿತು ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಅನೇಕರು ಪ್ರಯತ್ನ ನಡೆಸುತ್ತಿರುತ್ತಾರೆ. ಈ ಪ್ರಕರಣಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಇಮೇಲ್ ಆದ ಕಾರಣ ಯಾವ ದೇಶದಿಂದ ಎಂದು ಟ್ರ್ಯಾಕ್ ಮಾಡಲಾಗುತ್ತದೆ. ಬೇರೆ ದೇಶದಲ್ಲಿ ದುಷ್ಕರ್ಮಿಗಳು ಇದ್ದರೂ ಅವರನ್ನು ಬಂಧಿಸಿ ಕರೆತಂದ ಅನೇಕ ಉದಾಹರಣೆಗಳಿವೆ. ಈ ಬಾರಿಯೂ ಅಂತಹದ್ದೇ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.