ಬೆಂಗಳೂರು: 500 ವರ್ಷಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಿದ ಬಳಿಕ ದೇಶಾದ್ಯಂತ ರಾಮನದ್ದೇ ಗುಣಗಾನವಿರುವಾಗ ಕರ್ನಾಟಕದಲ್ಲಿ ಮಾತ್ರ ‘ರಾಮನಗರ’ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶ್ರೀರಾಮನ ಭೂಮಿಯೆಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಶ್ರೀರಾಮನ ಹೆಸರನ್ನು ಅಳಿಸಿ ಹಾಕಿದರೆ ಅದನ್ನು ಹಿಂದು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ಈ ನಿರ್ಧಾರ, ಹಿಂದುಗಳ ಗಾಯಕ್ಕೆ ಉಪ್ಪು ಸವರಿದಂತಿದೆ. ಕಾಂಗ್ರೆಸ್ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದಿತ್ತು, ನಂತರ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಈಗ ರಾಮನಗರದ ಹೆಸರು ಬದಲಾಯಿಸಿದೆ. ಇದರಿಂದ ಕಾಂಗ್ರೆಸ್‌ಗೆ ‘ಶ್ರೀರಾಮ’ನ ಬಗ್ಗೆ ವಿರೋಧವಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.
ರಾಮನಗರದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ಕಾಂಗ್ರೆಸ್ ಪಕ್ಷವು ಮತಾಂಧ ಕ್ರೂರಿ ಔರಂಗಜೇಬನ ಹೆಸರಿರುವ ದೆಹಲಿಯ ಔರಂಗಜೇಬ ರಸ್ತೆ, ತುಘಲಕ್ ರಸ್ತೆ ಇತ್ಯಾದಿ ಆಕ್ರಮಣಕಾರಿಗಳ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದೆಯೇ? ಕರ್ನಾಟಕದಲ್ಲಿರುವ ಮಹಾನಗರಗಳು ಮತ್ತು ನಗರಗಳ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ರಾಜ್ಯ ಸರ್ಕಾರ ಧೈರ್ಯ ತೋರುವುದೇ? ರಾಮನಗರ ಹೆಸರು ಬದಲಾವಣೆಗೆ ಹಿಂದುಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ, ಹಿಂದು ಸಮಾಜ ಬೀದಿಗಿಳಿಯದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | DK Shivakumar: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ
ರಾಮನಗರ ಹೆಸರು ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ
ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Ramanagara as Bengaluru South District) ಎಂದು ಬದಲಾವಣೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜು.26ರಂದು ನಡೆದ ಸಚಿವ ಸಂಪುಟ (cabinet meeting) ಒಪ್ಪಿಗೆ ನೀಡಿತ್ತು. ರಾಮನಗರ ಜಿಲ್ಲೆಯ ಹೆಸರು (Bengaluru South District) ಮಾತ್ರ ಬದಲಾವಣೆಯಾಗಲಿದೆ, ಜಿಲ್ಲಾ ಕೇಂದ್ರ (ರಾಮನಗರ) ಸೇರಿ ಉಳಿದ ಎಲ್ಲವೂ ಹಾಗೆ ಉಳಿಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ದೃಷ್ಟಿಯಿಂದ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಉಳಿದ ಎಲ್ಲವೂ ಹಾಗೇ ಉಳಿಯಲಿದೆ. ಚುನಾವಣಾ ದೃಷ್ಟಿಯಿಂದ ಹೀಗೆ ಮಾಡಿಲ್ಲ. ಜನರ ಹಿತಾಸಕ್ತಿ ಕಾಪಾಡಲು ಜೊತೆಗೆ ಬ್ರ್ಯಾಂಡ್ ಬೆಂಗಳೂರು ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ತಿಳಿಸಿದ್ದರು.
ರಾಮನಗರದವರೂ ಬ್ರ್ಯಾಂಡ್ ಬೆಂಗಳೂರಿಗೆ ಬರಬೇಕು ಎನ್ನುತ್ತಾರೆ. ಜನರ ಅಭಿಪ್ರಾಯ, ಶಾಸಕರ ಅಭಿಪ್ರಾಯ , ಕೆಲ ನಾಯಕರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡಿದ್ದೇವೆ. ನೋಟಿಫೈ ಮಾಡಬೇಕು, ಆಮೇಲೆ ಹೆಸರು ಬದಲಾವಣೆ ಪ್ರಕ್ರಿಯೆ ಶುರುವಾಗುತ್ತೆ. ಇದಕ್ಕೆ ಒಂದು ಸಮಿತಿಯನ್ನು ಮಾಡಲಾಗುತ್ತದೆ ಎಂದು ರಾಮನಗರ ಹೆಸರು ಬದಲಾವಣೆಗೆ ಸಚಿವ ಎಚ್.ಕೆ ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದರು.