ಹಾಸನ: ಬೆಂಗಳೂರಿನ ವಿದ್ಯಾರ್ಥಿಯನ್ನು ಕಿಡ್ನ್ಯಾಪ್ ಮಾಡಿ ಹಾಸನದಲ್ಲಿ ಬಿಟ್ಟುಹೋಗಿರುವ ಘಟನೆ ನಡೆದಿದೆ. ಬೆಂಗಳೂರಿನ ಅನಂತಪುರದ ನಾಗಾರ್ಜುನ ಪಿಯು ಕಾಲೇಜಿನ ವಿದ್ಯಾರ್ಥಿಯನ್ನು ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಕಿಡ್ನ್ಯಾಪ್ (Kidnap Case) ಮಾಡಿದ್ದರು. ಆದರೆ, ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿ ಎಚ್ಚರಗೊಂಡಾಗ, ಹಾಸನ ಜಿಲ್ಲೆಯ ಅರಕಲಗೂಡು ಸಮೀಪ ಇದ್ದದ್ದು ತಿಳಿದುಬಂದಿದೆ.
ಬೆಂಗಳೂರಿನ ಅನಂತಪುರದ ಕೃಷ್ಣೇಗೌಡರ ಮಗ ಚಿರಾಗ್ (17) ಕಿಡ್ನ್ಯಾಪ್ ಆಗಿದ್ದ ಬಾಲಕ. ಮಂಗಳವಾರ ಬೆಳಗ್ಗೆ ಕಾಲೇಜಿಗೆ ತೆರಳುವ ವೇಳೆ ಪ್ರಜ್ಞೆ ತಪ್ಪಿಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಲಾಗಿದೆ. ನಂತರ ಎಚ್ಚರಗೊಂಡು ನೋಡಿದಾಗ ತಾನು ಅರಕಲಗೂಡು ಸಮೀಪ ಇರುವುದಾಗಿ ವಿದ್ಯಾರ್ಥಿಗೆ ತಿಳಿದುಬಂದಿದೆ. ಈ ಬಗ್ಗೆ ಫೋನ್ ಮಾಡಿ ಪೋಷಕರಿಗೆ ತಿಳಿಸಿದ್ದಾನೆ. ಮಾಹಿತಿ ಪಡೆದ ಪೋಷಕರು, ಕೂಡಲೇ ಹಾಸನಕ್ಕೆ ಬಂದು ಮಗನನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ | Operation Leopard : ಆಪರೇಷನ್ ಸಕ್ಸಸ್; 3 ದಿನದಿಂದ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
ವಿಳಾಸ ಕೇಳುವ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಸ್ವಸ್ಥಗೊಂಡಿದ್ದ ಬಾಲಕನಿಗೆ ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಗೆ ಕಿಡ್ನ್ಯಾಪ್ ಬಗ್ಗೆ ಪೋಷಕರು ದೂರು ನೀಡಿದ್ದು, ಯಾರು ಯಾವ ಕಾರಣಕ್ಕೆ ಕಿಡ್ನಾಪ್ ಮಾಡಿದ್ದಾರೆ ಎನ್ನೋ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಅಪಘಾತಕ್ಕೀಡಾದ ವಿದ್ಯಾರ್ಥಿನಿ ಅಶ್ವಿನಿ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು: ಮಹಾರಾಣಿ ಕಾಲೇಜಿನಲ್ಲಿ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಅಶ್ವಿನಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಸದ್ಯ ಜೈನ್ ಆಸ್ಪತ್ರೆಯಲ್ಲಿ ಅಶ್ವಿನಿಗೆ ಚಿಕಿತ್ಸೆ ಮುಂದುವರಿದಿದ್ದು, ಐಸಿಯುನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿ ಆವರಣದಲ್ಲಿ ಅಕ್ಟೋಬರ್ 7ರಂದು ಪ್ರೊಫೆಸರ್ ನಾಗರಾಜ್ ಎಂಬುವವರ ಕಾರು ಡಿಕ್ಕಿಯಾಗಿ ಅಶ್ವಿನಿ ಸೇರಿ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದವು. ಅಪಘಾತದಲ್ಲಿ ಅಶ್ವಿನಿ ತಲೆ, ಕಾಲುಗಳಿಗೆ ತೀವ್ರ ಪೆಟ್ಟುಗಿತ್ತು. ಹೀಗಾಗಿ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನು ಕೆಲವು ತಿಂಗಳು ವಿಶ್ರಾಂತಿಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಇನ್ನೂ ಒಂದು ತಿಂಗಳ ಕಾಲ ಬೆಡ್ ರೆಸ್ಟ್ ಮಾಡಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಯುನಿವರ್ಸಿಟಿಯವರು ಇನ್ನು ಚಿಕಿತ್ಸೆ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಡಿಸ್ಚಾರ್ಜ್ ಮಾಡಿಸಿ ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಘಾತವಾದಾಗ ಎಲ್ಲಾ ಚಿಕಿತ್ಸೆ ವೆಚ್ಚ ನಾವೇ ಭರಿಸುವುದಾಗಿ ಯುನಿವರ್ಸಿಟಿ ವಿಸಿ ಹೇಳಿದ್ದರು.
ಇದನ್ನೂ ಓದಿ | Murder Case: ಅತ್ಯಾಚಾರಕ್ಕೆ ವಿರೋಧಿಸಿದ ತಾಯಿಯನ್ನೇ ಕೊಂದ ಕಡುಪಾಪಿ ಮಗ
ಯೂನಿವರ್ಸಿಟಿಯವರ ನಡವಳಿಕೆಯಿಂದ ಚಿಕಿತ್ಸೆ ವೆಚ್ಚಕ್ಕಾಗಿ ಅಶ್ವಿನಿ ಕುಟುಂಬಸ್ಥರು ಪರದಾಡುತ್ತಿದ್ದಾರೆ. ನನ್ನ ಭವಿಷ್ಯ ಹಾಳು ಮಾಡಿದ್ದೀರಿ, ಸಹಾಯ ಮಾಡಿ ಎಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಗತಿನಗರದ ನಿವಾಸಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ