ಬೆಂಗಳೂರು: ಜೆ.ಪಿ.ನಗರದಲ್ಲಿ ನೇಪಾಳಿ ಗ್ಯಾಂಗ್ ಕೃತ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಉದ್ಯಮಿ ಮನೆಯಲ್ಲಿ ದರೋಡೆ ಮಾಡಿದ್ದ ಖತರ್ನಾಕ್ (Bengaluru Theft Case) ಒರಿಸ್ಸಾ ಗ್ಯಾಂಗ್‌ವೊಂದನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕ್, ಭಕ್ತ ಹರಿ ಮಲ್ಲಿಕ್ ಹಾಗೂ ನಬೀನ್ ಸುನಾರಿ ಬಂಧಿತ ಆರೋಪಿಗಳಾಗಿದ್ದಾರೆ.
ಕೋರಮಂಗಲದ 3ನೇ ಬ್ಲಾಕ್‌ನ ಉದ್ಯಮಿಯ ಇಡೀ ಕುಟುಂಬದವರು ಹೊರರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದರು. ಮನೆಗೆ ಯಾವುದೇ ಸೆಕ್ಯುರಿಟಿ ಗಾರ್ಡ್ ಹಾಗೂ ಸಿಸಿ ಕ್ಯಾಮರಾ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಒರಿಸ್ಸಾ ಗ್ಯಾಂಗ್‌ನವರು ಇಡಿ ಮನೆಯನ್ನು ದೋಚಿ ಪರಾರಿ ಆಗಿದ್ದರು. ಉದ್ಯಮಿಯ ಕುಟುಂಬಸ್ಥರು 10 ದಿನಗಳ ಟ್ರಿಪ್ ಮುಗಿಸಿ ಬಂದಾಗ ಕಳ್ಳತನ ಆಗಿರುವುದು ಬಯಲಿಗೆ ಬಂದಿತ್ತು.
ಉದ್ಯಮಿ ಮನೆಯಲ್ಲಿದ್ದ ಡೈಮಂಡ್, 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ನಾಣ್ಯಗಳು, 3 ಲಕ್ಷ ರೂಪಾಯಿ ಮೌಲ್ಯದ ಒಮೇಗಾ ವಾಚ್ ಅನ್ನು ಕಳವು ಮಾಡಿದ್ದರು. ಜತೆಗೆ ಲ್ಯಾಪ್‌ಟಾಪ್, ಕ್ಯಾಮೆರಾ ಹಾಗೂ ಟ್ಯಾಬ್ ಅನ್ನು ಕೂಡ ದೋಚಿ ಪರಾರಿ ಆಗಿದ್ದರು.
300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಪರಿಶೀಲನೆ
ಉದ್ಯಮಿ ಮನೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದೆ ಇದ್ದರಿಂದ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಹೀಗಾಗಿ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಒರಿಸ್ಸಾದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸುಮಾರು 300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಫೆ.17 ರಂದು ಕೃತ್ಯ ನಡೆಸುವಾಗ ಯಾವುದೇ ಮೊಬೈಲ್ ಅನ್ನು ಸಹ ಬಳಕೆ ಮಾಡಿರಲಿಲ್ಲ.
ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಜಾಡು ಹಿಡಿದ ಪೊಲೀಸರು ಬಂದು ನಿಂತಿದ್ದು ರೈಲ್ವೆ ನಿಲ್ದಾಣದ ಬಳಿ. ರೈಲ್ವೆ ನಿಲ್ದಾಣದಲ್ಲಿ ಖರೀದಿ ಮಾಡಿದ್ದ ಟಿಕೆಟ್ ಬಗ್ಗೆ ತನಿಖೆ ನಡೆಸಿದ ಮೇಲೆ ಒರಿಸ್ಸಾ ಗ್ಯಾಂಗ್ ಎಂಬುದು ತಿಳಿದು ಬಂದಿದೆ. ಇನ್ನು ಈ ಒರಿಸ್ಸಾ ಗ್ಯಾಂಗ್‌ನವರು ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ತಮ್ಮ ಊರಿನಲ್ಲಿ ಭವ್ಯ ಬಂಗಲೆಯನ್ನು ಕಟ್ಟಿಸುತ್ತಾ ಇದ್ದರು ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ