ಬೆಂಗಳೂರು: ಹೊಸತನ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಎಂದಿಗೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರು ದೇಶದ ನಾನಾ ಭಾಗಗಳ ಜನರನ್ನು ಕೈಬೀಸಿ ಕರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಈಗ ಮತ್ತೊಂದು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಹೌದು, ರಾಜ್ಯ ರಾಜಧಾನಿಯಲ್ಲಿ ಶೀಘ್ರವೇ ಪ್ರಯಾಣಿಕರ (Commuters) ಅನುಕೂಲಕ್ಕಾಗಿ ಹೊಸ ನ್ಯಾವಿಗೇಟಿಂಗ್ ಆ್ಯಪ್ (Navigating App) ಬರಲಿದೆ. ಬೆಂಗಳೂರಿನಲ್ಲಿ ಸಂಚರಿಸುವರಿಗೆ ಇದು ಉತ್ತಮ ‘ಮಾರ್ಗ’ದರ್ಶನ ನೀಡಲಿದೆ.
ಬೆಂಗಳೂರಿನಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿ ಎಂಬ ದೃಷ್ಟಿಯಿಂದ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಮ್ಯಾಪ್‌ಪ್ಲಸ್ ಮ್ಯಾಪ್‌ಮೈಇಂಡಿಯಾ (Mappls MapmyIndia) ಎಂಬ ಕಂಪನಿಯ ಜತೆ ಒಡಂಡಿಕೆ (MoU) ಮಾಡಿಕೊಂಡಿದೆ. ಈಗಾಗಲೇ ಮ್ಯಾಪ್‌ಪ್ಲಸ್ ಮ್ಯಾಪ್‌ಮೈಇಂಡಿಯಾ ಕಂಪನಿಯು ಆ್ಯಪ್ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
ಹೊಸ ಆ್ಯಪ್‌ನಿಂದ ಏನೆಲ್ಲ ಅನುಕೂಲ?
ಹೊಸ ಆ್ಯಪ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಕಡಿಮೆ ಟ್ರಾಫಿಕ್ ಇರುವ ರಸ್ತೆಗಳನ್ನು ಸೂಚಿಸುವುದು, ರಿಯಲ್ ಟೈಮ್ ಆಗಿ ನ್ಯಾವಿಗೇಟ್ ಮಾಡುವುದು, ಯಾವ ರಸ್ತೆಗಳು ಕ್ಲೋಸ್ ಆಗಿವೆ, ಯಾವ ಕಡೆ ಹೋದರೆ ಉತ್ತಮ ರಸ್ತೆ ಇದೆ, ಯಾವ ಮಾರ್ಗಗಳು ಇಕ್ಕಟ್ಟವಾಗಿವೆ ಎಂಬುದು ಸೇರಿ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಲಿದೆ. ಇದು ಗೂಗಲ್ ಮ್ಯಾಪ್‌ಗೆ ಪರ್ಯಾಯವಾಗಿ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬುದಾಗಿ ತಿಳಿದುಬಂದಿದೆ.
“ಹೊಸ ಆ್ಯಪ್‌ನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಟ್ರಾಫಿಕ್ ಪೊಲೀಸರಿಗೆ ಇದು ಅನುಕೂಲವಾಗಲಿದೆ. ಎಲ್ಲೆಲ್ಲಿ ಟ್ರಾಫಿಕ್ ಇದೆ ಎಂಬುದನ್ನು ಆ್ಯಪ್ ಮೂಲಕವೇ ಪತ್ತೆಹಚ್ಚಿ, ಆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ರೋಡ್‌ಬ್ಲಾಕ್‌ಗಳು, ಗುಂಡಿಗಳು, ದುರಸ್ತಿ ಕೆಲಸ ನಡೆಯುತ್ತಿರುವ ರಸ್ತೆಗಳ ಕುರಿತು ಕೂಡ ಮಾಹಿತಿ ನೀಡಲಿದೆ” ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: WhatsApp : ನಿಮ್ಮ ವಾಟ್ಸ್ಆ್ಯಪ್ನಲ್ಲಿ ಈ ಫೀಚರ್ ಇಲ್ಲವೇ? ತಕ್ಷಣ ಅಪ್ಡೇಟ್ ಮಾಡಿಕೊಳ್ಳಿ