ಬೆಂಗಳೂರು: ಪೊಲೀಸರೆಂದರೇ ಹಾಗೆ. ಹೆಚ್ಚಿನವರು ಯಾವ ಕ್ಷಣದಲ್ಲಿ ಬೇಕಾದರೂ ನಮ್ಮ ರಕ್ಷಣೆಗೆ ಬಂದು ನಿಲ್ಲುವ ಅಣ್ಣ-ತಮ್ಮರ ಹಾಗೆ, ಬಂಧುಗಳ ಹಾಗೆ (Salute to police). ಅವರ ಈ ಮಾನವೀಯ ಕಳಕಳಿಯ ಸೇವೆ ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪ್ರಾಣಿ ಪಕ್ಷಿಗಳನ್ನು ಕೂಡಾ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ತಮ್ಮ ಪ್ರಾಣದ ಹಂಗನ್ನೇ ತೊರೆದು ರಕ್ಷಣೆಗೆ ಮುಂದಾಗುತ್ತಾರೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಕೆಲವೆ ದಿನಗಳ ಹಿಂದೆ ನಡೆದ ಒಂದು ಘಟನೆ ಜೀವಂತ ಉದಾಹರಣೆ.
ಜನವರಿ ೨ರಂದು ನಡೆದ ಘಟನೆ ಇದು. ರಾಜಾಜಿ ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಅವರು ಕರ್ತವ್ಯದಲ್ಲಿದ್ದರು. ಹಾಗೇ ಮೇಲೆ ನೋಡುತ್ತಿದ್ದಾಗ ಅಲ್ಲಿನ ಹೋರ್ಡಿಂಗ್ ಟವರ್ ಒಂದರಲ್ಲಿ ಪಾರಿವಾಳವೊಂದು ಸಿಕ್ಕಿ ಒದ್ದಾಡುತ್ತಿರುವುದು ಕಂಡಿತು. ಹೋರ್ಡಿಂಗ್ ಸುಮಾರು ಒಂದು ತೆಂಗಿನ ಮರದಷ್ಟು ಎತ್ತರವಾಗಿತ್ತು. ಇನ್ನೂ ಹೊಸ ಜಾಹೀರಾತು ಹಾಕದೆ ಇದ್ದುದರಿಂದ ಕೇವಲ ಅದರ ಅಸ್ಥಿಪಂಜರವಷ್ಟೇ ಇತ್ತು. ಪಾರಿವಾಳ ಗಾಳಿಪಟದ ಒಂದು ದಾರಕ್ಕೆ ಸಿಲುಕಿ ಹಾಕಿಕೊಂಡು ಪಟಪಟಿಸುತ್ತಿರುವಂತೆ ಅವರಿಗೆ ಕಂಡಿತು. ಈಗಲೇ ಏನಾದರೂ ಮಾಡದೆ ಹೋದರೆ ಪಾರಿವಾಳ ಜೀವ ಭಯದಲ್ಲಿ ಸರಳುಗಳಿಗೆ ಬಡಿದೇ ಪ್ರಾಣ ಕಳೆದುಕೊಳ್ಳುತ್ತದೆ ಎಂದು ಅವರಿಗೆ ಅನಿಸಿತು.
ಆಗ ಅವರಿಗೆ ಹೊಳೆದದ್ದು ಒಂದೇ ಉಪಾಯ. ಅಷ್ಟೂ ಎತ್ತರದ ಆ ಟವರ್‌ನ್ನು ಏರಿ ಹಕ್ಕಿಯನ್ನು ರಕ್ಷಣೆ ಮಾಡುವುದು. ಹೀಗೆ ನಿರ್ಧರಿಸಿದ ಅವರು ಕಾನ್‌ಸ್ಟೇಬಲ್ ವೃತ್ತಿಯನ್ನು ಸೇರುವಾಗ ಮಾಡಿದ ಸಾಹಸಗಳನ್ನು ನೆನಪು ಮಾಡಿಕೊಂಡರು. ಎದೆ ಸೆಟೆಸಿ ಮಾಡಿದ ಕರ್ತವ್ಯಗಳನ್ನು ಮೆಲುಕು ಹಾಕಿಕೊಂಡರು. ಅಂತಿಮವಾಗಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದು ತೆಂಗಿನ ಮರದೆತ್ತದ ಹೋರ್ಡಿಂಗ್ ಬೋರ್ಡನ್ನು ಹತ್ತಿಯೇ ಬಿಟ್ಟರು.
ನಿಜವೆಂದರೆ ಅದು ಸಾಮಾನ್ಯರಿಗೆ ಆಗುವ ಕೆಲಸವಲ್ಲ. ಕಬ್ಬಿಣದ ಶಲಾಕೆಗಳನ್ನು ಹಿಡಿದು ಹತ್ತಬೇಕು, ಕಂಬಿಗಳನ್ನು ಹಿಡಿದು ದಾಟಬೇಕು. ಕೊನೆಗೆ ಎತ್ತರದ, ಆ ಕಾಗೆ ಇರುವ ಜಾಗವನ್ನು ತಲುಪಬೇಕು. ಸುರೇಶ್ ಸಾಹಸದಿಂದ ಅಲ್ಲಿಗೆ ತಲುಪಿದರು. ಚಡಪಡಿಸುತ್ತಿದ್ದ, ಪಟಪಟಿಸುತ್ತಿದ್ದ ಆ ಕಾಗೆಯನ್ನು ಪ್ರೀತಿಯಿಂದ ಶಾಂತಗೊಳಿಸಿದರು. ಅದರ ಕಾಲಿಗೆ ಸಿಕ್ಕಿಹಾಕಿಕೊಂಡಿದ್ದ ದಾರವನ್ನು ಅತ್ಯಂತ ಜತನದಿಂದ ಮತ್ತು ತಾಳ್ಮೆಯಿಂದ ಬಿಡಿಸಿದರು. ಕೊನೆಗೆ ಎರಡೂ ಕೈಗಳಲ್ಲಿ ಹಿಡಿದು ಆ ಪಾರಿವಾಳವನ್ನು ಮಕ್ಕಳಂತೆ ಪುರ‍್ರನೆ ಹಾರಿಬಿಟ್ಟರು. ಆ ಕ್ಷಣದಲ್ಲಿ ಅವರ ಮುಖದಲ್ಲೊಂದು ನಿರಾಳವಾದ ಮುಗುಳ್ನಗೆ ಹೊಮ್ಮಿತ್ತು.
ವೈರಲ್ ಆದ ವಿಡಿಯೊ
ಇದಿಷ್ಟೂ ಘಟನಾವಳಿಗಳನ್ನು ಒಳಗೊಂಡ ಒಂದು ವಿಡಿಯೊವನ್ನು ಬೆಂಗಳೂರಿನ ಟ್ರಾಫಿಕ್ ಪಶ್ಚಿಮ ವಿಭಾಗದ ಡೆಪ್ಯುಟಿ ಕಮಿಷನರ್ ಆಗಿರುವ ಕುಲ್ದೀಪ್ ಕುಮಾರ್ ಆರ್ ಜೈನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯದ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಕೂಡಾ ಇದನ್ನು ಹಂಚಿಕೊಂಡು ಪೊಲೀಸರ ಮಾನವೀಯ ಸಾಹಸಕ್ಕೆ ಸಲಾಂ ಹೇಳಿದ್ದಾರೆ.
ʻಪೊಲೀಸರ ಒಳಗೆ ಅಡಗಿರುವ, ಇನ್ನೂ ಹೊರಬಾರದ ಮಾನವೀಯ ಮುಖವಿದು. ವೆಲ್ ಡನ್ ಸುರೇಶ್ʼʼ ಎಂದು ಕುಲ್ದೀಪ್ ಕುಮಾರ್ ಜೈನ್ ಅವರು ಬರೆದುಕೊಂಡು ಖುಷಿಪಟ್ಟಿದ್ದಾರೆ.
The hidden and unexplored side of a policemen. Well done Mr Suresh from @rajajinagartrps pic.twitter.com/D9XwJ60Npz
— Kuldeep Kumar R. Jain, IPS (@DCPTrWestBCP) December 30, 2022
ಲಕ್ಷಾಂತರ ನೋಟಗಳು, ಸುರಕ್ಷತೆಯ ಬಗ್ಗೆಯೂ ಚರ್ಚೆ
ಈ ವಿಡಿಯೊವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ, ಹಂಚಿಕೊಂಡಿದ್ದಾರೆ. ಪೊಲೀಸರ ಸಾಹಸವನ್ನು ಮೆಚ್ಚಿ ಹೊಗಳಿದ್ದಾರೆ. ಇದೇ ವೇಳೆ ಪೊಲೀಸರ ಭದ್ರತೆ ಮತ್ತು ಸುರಕ್ಷತೆಯ ವಿಚಾರವೂ ಈ ಮೂಲಕ ಚರ್ಚೆಗೆ ಗ್ರಾಸವಾಗಿದೆ. ಸುರೇಶ್ ಅವರು ಯಾವುದೇ ಸುರಕ್ಷತೆ ಇಲ್ಲದೆ, ರಕ್ಷಣೆಗೆ ವ್ಯವಸ್ಥೆ ಮಾಡದೆ ಹಕ್ಕಿಯ ರಕ್ಷಣೆಗೆ ಹೋಗಿದ್ದು ಸರಿಯೇ ಎಂದು ಕೆಲವರು ಚರ್ಚೆ ಮಾಡಿದ್ದಾರೆ. ಜತೆಗೆ ಕೆಲವರು ಪೊಲೀಸರಿಗೆ ಇಂಥ ಪರಿಸ್ಥಿತಿಗಳನ್ನು ನಿಭಾಯಿಸಲು ಬೇಕಾದ ತರಬೇತಿ ಮತ್ತು ಸುರಕ್ಷಾ ಸಲಕರಣೆಗಳನ್ನು ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಇದು ಅವರ ಕರ್ತವ್ಯವನ್ನು ಹೊರತಾದ ಮಾನವೀಯ ನೆರವು. ಅವರಿಗೆ ಸೂಕ್ತವಾದ ಬಹುಮಾನ ಕೊಡಿ ಎಂದು ಕೆಲವರು ಹೇಳಿದ್ದಾರೆ.
ನಾನು ಅವರ ಸಾಹಸವನ್ನು ಶ್ಲಾಘಿಸುತ್ತೇನೆ. ಆದರೆ, ಜೀವವನ್ನು ಒತ್ತೆ ಇಟ್ಟು ಇಂಥ ಕೆಲಸಗಳನ್ನು ಮಾಡಬೇಕಾಗಿಲ್ಲ. ಯಾಕೆಂದರೆ, ಅವರಿಗೂ ಮನೆಯಲ್ಲಿ ಕುಟುಂಬ ಎನ್ನುವುದು ಇರುತ್ತದಲ್ವಾ ಎನ್ನೋದು ಇನ್ನೊಬ್ಬರ ಕಾಳಜಿಯ ಮಾತು.
ಅನಾಹುತ ನಡೆದಿದ್ದರೆ ಯಾರೂ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ ಸರ್
ʻʻಸರ್ ಸೂಕ್ತ ಸುರಕ್ಷತಾ ಸಲಕರಣೆಗಳಿಲ್ಲದೆ ಇಂಥ ಸಾಹಸಕ್ಕೆ ಹೋಗುವುದನ್ನು ಪ್ರೋತ್ಸಾಹಿಸಬೇಡಿ. ಇಲ್ಲಿ ಏನೋ ಎಲ್ಲವೂ ಸರಿಯಾಗಿ ನಡೆದು ಸುರೇಶ್ ಅವರು ದೊಡ್ಡ ಸಾಧನೆ ಮಾಡಿದಂತಾಯಿತು. ಒಂದೊಮ್ಮೆ ಏನಾದರೂ ಅನಾಹುತ ಸಂಭವಿಸಿರುತ್ತಿದ್ದರೆ ಯಾವ ಇಲಾಖೆಯೂ ಅವರ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ. ಯಾರೂ ಅವರನ್ನು ಸಪೋರ್ಟ್ ಮಾಡುತ್ತಿರಲಿಲ್ಲ. ಅವರ ಕುಟುಂಬದ ನೆರವಿಗೆ ಯಾರೂ ನಿಲ್ಲುತ್ತಿರಲಿಲ್ಲʼʼ ಎಂದು ಒಬ್ಬರು ಕಾಳಜಿಯಿಂದ ಬರೆದಿದ್ದಾರೆ.
ಪಿಸಿಆರ್ ವಾಹನದಲ್ಲಿ ಸುರಕ್ಷಾ ಸಲಕರಣೆ ಇಡಬಹುದೇ?
ʻʻಇದೊಂದು ಅತ್ಯುತ್ತಮ ಉದ್ದೇಶವನ್ನು ಹೊಂದಿದ್ದ ಕೆಲಸ ಮತ್ತು ದೊಡ್ಡ ಮಟ್ಟದ ಕಾಳಜಿಯ ಕೆಲಸ. ಆದರೆ, ಪೊಲೀಸರಿಗೆ ಸೂಕ್ತವಾದ ಸುರಕ್ಷಾ ವ್ಯವಸ್ಥೆ ಒದಗಿಸುವುದು ಒಳ್ಳೆಯದು ಅನಿಸುತ್ತದೆ. ನಮ್ಮ ಪಿಸಿಆರ್ ವಾಹನಗಳಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅವಕಾಶವಿರುವ ಸಲಕರಣೆಗಳನ್ನು ಇಡಬಹುದೇ ಎಂಬ ಬಗ್ಗೆ ಪರಿಶೀಲಿಸುವುದು ಒಳ್ಳೆಯದುʼʼ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಗೃಹ ಸಚಿವರಿಂದಲೂ ಪ್ರಶಂಸೆ
ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಕೂಡಾ ಈ ಪೊಲೀಸ್ ಸಿಬ್ಬಂದಿಯ ಸಾಹಸವನ್ನು ಕೊಂಡಾಡಿದ್ದಾರೆ. ನಮ್ಮ ಸಂಚಾರಿ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಶ್ರೀ ಸುರೇಶ್ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ನಮ್ಮ ಸಂಚಾರಿ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ.
— Araga Jnanendra (@JnanendraAraga) January 2, 2023
ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಶ್ರೀ ಸುರೇಶ್ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು.@DCPTrWestBCP @blrcitytraffic pic.twitter.com/s4h9ev8Uc2
ಸುರೇಶ್ ಅವರ ಈ ಸಾಹಸಕ್ಕೆ, ಮಾನವೀಯ ಕಾಳಜಿಗೆ ಸೂಕ್ತ ಬಹುಮಾನ, ಗೌರವ ನೀಡಬೇಕು. ಪೊಲೀಸರಿಗೆ ಇಂಥ ಸಾಹಸಕ್ಕೆ ಹೋಗುವಾಗ ಸುರಕ್ಷತೆಯ ಎಚ್ಚರಿಕೆ ಇರಬೇಕು ಎನ್ನುವ ನೆಟ್ಟಿಗರ ಕಾಳಜಿಯನ್ನು ಸರ್ಕಾರ ಮತ್ತು ಇಲಾಖೆ ಹೇಗೆ ಪರಿಗಣಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ! ಸಾಧನೆ ದಾಖಲಾಗೋದು ಸಂಕಷ್ಟ ಕಾಲದಲ್ಲೇ!