ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ದಣಿವಾರಿಸಿಕೊಳ್ಳಲು ಕಾರಿನಲ್ಲಿ ಮಲಗಿದ್ದ ಕ್ಯಾಬ್ ಚಾಲಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಮಡಿವಾಳದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಹಾಸನ ಮೂಲದ ಕ್ಯಾಬ್ ಚಾಲಕ ದಿಲೀಪ್ ಹಲ್ಲೆಗೊಳಗಾದ ವ್ಯಕ್ತಿ. ಮಡಿವಾಳದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ.
ಪ್ರದೇಶದಲ್ಲಿ ಆಟೊ ಚಲಾಯಿಸುವ ಸಂತೋಷ್ ಹೇಳುವ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಆಟೊ ಚಾಲಕರು ಈ ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಪ್ರತಿನಿತ್ಯ 10-20 ಆಟೊ ಚಾಲಕರು ತಮ್ಮ ವಾಹನದಲ್ಲೆ ಮಲಗಿ ವಿಶ್ರಾಂತಿ ಪಡೆಯುವುದು ಅಭ್ಯಾಸ. ಅದೇ ರೀತಿ ದಿಲೀಪ್ ಸಹ ಕ್ಯಾಬ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳು ಬೆದರಿಸಿ, ಚಾಕು ಇರಿದಿದ್ದಾರೆ.
ಈ ಸ್ಥಳದಲ್ಲಿ ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿವೆ. ಮಹಿಳೆಯರ ಸರಗಳ್ಳತನ, ಮೊಬೈಲ್ ಕೈಯಲ್ಲಿ ಹಿಡಿದು ಹೋಗುತ್ತಿದ್ದರೆ ಕಿತ್ತುಕೊಂಡು ಹೋಗುವುದು, ಬೆದರಿಸಿ ಹಣ ದೋಚುವುದು ನಡೆಯುತ್ತಲೇ ಇದೆ ಎಂದು ಸಂತೋಷ್ ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ | ಕದ್ದ ಮೊಬೈಲ್ ಕೊಂಡೊಯ್ಯಲು ಕಾರನ್ನೇ ಕಳ್ಳತನ ಮಾಡಿದರು !
ಇನ್ನೊಂದು ಮೂಲದ ಪ್ರಕಾರ, ಬೊಮ್ಮಸಂದ್ರದಿಂದ ವಾಹನ ಬಾಡಿಗೆಗೆ ಬಂದಿದೆ. ಈ ವಾಹನದಲ್ಲಿ ಬಂದ ಪ್ರಯಾಣಿಕರು ಹಾಗೂ ಕ್ಯಾಬ್ ಚಾಲಕ ದಿಲೀಪ್ ನಡುವೆ ಬಾಡಿಗೆ ವಿಚಾರಕ್ಕೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಚಾಕು ಇರಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಘಟನೆ ನಡೆದ ಸ್ಥಳದ ರಸ್ತೆಯ ಮೇಲೆಲ್ಲ ರಕ್ತ ಚಲ್ಲಿದ ಗುರುತು ಹಾಗೆಯೇ ಉಳಿದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಸತ್ಯಾಂಶ ಏನು ಎಂಬುದರ ಕುರಿತು ಮಡಿವಾಳ ಪೊಲೀಸರಿಂದ ತನಿಖೆ ನಡೆಯುತ್ತಿದೆ.