ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸಿಗರು ಬಿಜೆಪಿ ಸರ್ಕಾರಕ್ಕೆ ಹೆದರುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ತಿರುಗೇಟು ನೀಡಿದೆ. ಒಂದರ ನಂತರ ಒಂದರಂತೆ ಒಂಭತ್ತು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ʼಬುರುಡೆ ರಾಮಯ್ಯʼ ಎಂದು ತೆಗಳಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕುಟುಂಬದವರಿಗೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಇ.ಡಿ ಸಮನ್ಸ್ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತ್ತು. ಕರ್ನಾಟಕದಲ್ಲೂ ಇ.ಡಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಅನೇಕರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ | ಇವತ್ತು ಹೆಡ್ಗೆವಾರ್ ಪಠ್ಯ, ನಾಳೆ ಗೋಡ್ಸೆ ಪಠ್ಯ: ಸಿದ್ದರಾಮಯ್ಯ ವಾಗ್ದಾಳಿ
“ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ. ಕಾಂಗ್ರೆಸ್ ಅನ್ನುವುದೊಂದು ಸ್ವಾತಂತ್ರ್ಯ ಚಳವಳಿ ಅಷ್ಟೇ. ರಾಜಕೀಯ ಕಾಂಗ್ರೆಸ್ ಪಕ್ಷಕ್ಕೂ, ಕಾಂಗ್ರೆಸ್ ಚಳುವಳಿಗೂ ಸಂಬಂಧವೇ ಇಲ್ಲ. ಎಲ್ಲವನ್ನೂ ಹೈಜಾಕ್ ಮಾಡಿದ್ದೀರಿ. ಅಸಲಿ ಗಾಂಧಿಯನ್ನೂ ಹೈಜಾಕ್ ಮಾಡಿದ್ದೀರಿʼ ಎಂದಿದೆ.
ಸರ್ಕಾರಕ್ಕೆ ಕಾಂಗ್ರೆಸ್ ಹೆದರುವುದು ಬೇಡ, ಅದರ ಅಗತ್ಯವೂ ಇಲ್ಲ ಎಂದಿರುವ ಬಿಜೆಪಿ, ಕಾಂಗ್ರೆಸ್ ಅಸ್ತಿತ್ವವೇ ಶೂನ್ಯ. ನೀವು ಈ ನೆಲದ ಕಾನೂನಿನ ಬಗ್ಗೆ, ಈ ನೆಲದ ಸಂವಿಧಾನ ಮೇಲೆ ಭಯ ಇಟ್ಟುಕೊಂಡರೆ ಸಾಕು. ಆದರೆ ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ನೀವಿಂದು ಸಂವಿಧಾನವನ್ನು ಕಾಲಡಿಗೆ ಹಾಕುತ್ತಿದ್ದೀರಿ, ಅಕ್ಷಮ್ಯವಿದು ಎಂದಿದೆ.
“ಸುಳ್ಳು ಪಾಪ, ಸತ್ಯ ತಪಸ್ಸು” ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರ ಟ್ವೀಟನ್ನು ಉಲ್ಲೇಖಿಸಿರುವ ಬಿಒಜೆಪಿ ಟ್ವಿಟ್ಟರ್ ಖಾತೆ, ಕಾಂಗ್ರೆಸ್ಸಿಗರ ವಂಶವಾಹಿನಿಯಲ್ಲೇ ಸುಳ್ಳು ಪ್ರವಹಿಸುತ್ತಿದೆ. ಸತ್ಯದ ಸಮಾಧಿ ಮಾಡಿ, ಸುಳ್ಳಿನ ಅರಮನೆ ಕಟ್ಟದೇ ಇದ್ದಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ. ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ ಎಂದಿದೆ.
ಸತ್ಯವೇ ನಮ್ಮ ತಾಯಿ – ತಂದೆ ಎನ್ನುತ್ತಾ ಸುಳ್ಳನ್ನೇ ಉಸಿರಾಡುವ #ಬುರುಡೆರಾಮಯ್ಯ ಅವರು, ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದರು ಎಂದು ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಸ್ವಾತಂತ್ರ್ಯ ಯೋಧರ ಪಟ್ಟಕಟ್ಟಲು ಹೊರಟಿದ್ದಾರೆ. ಸ್ವಾತಂತ್ರ್ಯ ಯೋಧರಿಗೆ ಅವಮಾನವಿದು!
ಸಿದ್ದರಾಮಯ್ಯನವರೇ, ಈ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬೇರೆ, ಮಹಾತ್ಮ ಗಾಂಧಿ ಬೇರೆ. ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಮಹಾತ್ಮ ಗಾಂಧಿಯೇ ಹೊರತು, ಈ ನಕಲಿ ಗಾಂಧಿಗಳಲ್ಲ. #ಬುರುಡೆರಾಮಯ್ಯ ಅವರು ಗಾಂಧಿ ಕುಟುಂಬದ ವಂಶ ವೃಕ್ಷದ ಬಗ್ಗೆ ಮೊದಲು ಅರಿತುಕೊಳ್ಳಬೇಕು.
ಮಹಾತ್ಮ ಗಾಂಧಿ ನೇತೃತ್ವದ “ಕಾಂಗ್ರೆಸ್ ಚಳವಳಿ” ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ನಿಜ. ಆದರೆ, ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯವನ್ನೇ ಅಪಹರಿಸಿತ್ತು. ಸಿದ್ದರಾಮಯ್ಯನವರೇ, ತುರ್ತು ಪರಿಸ್ಥಿತಿಯ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಟೀಕಿಸಿದೆ.
ಇದನ್ನೂ ಓದಿ | ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆ: ಕಾಲ್ನಡಿಗೆಯಲ್ಲಿ ಹೊರಟ ಕಾಂಗ್ರೆಸಿಗರು ಪೊಲೀಸ್ ವಶಕ್ಕೆ