Site icon Vistara News

ಹಿಂದವೀ ಮೀಟ್‌ ಮಾರ್ಟ್‌ಗೆ ಬಿಬಿಎಂಪಿ “ಝಟ್ಕಾ”: ಪರವಾನಗಿ ಪಡೆಯಲು ನೋಟಿಸ್‌

ಬೆಂಗಳೂರು: ಹಲಾಲ್‌(Halal) ಕಟ್‌ ಮಾಂಸವನ್ನು ವಿರೋಧಿಸಿ ಝಟ್ಕಾ (Jhatka) ಕಟ್‌ ಮಾಂಸದ ಉದ್ಯಮ ಆರಂಭಿಸಿರು ಹಿಂದವೀ ಮೀಟ್‌ ಮಾರ್ಟ್‌ಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಮಾಂಸದ ಅಂಗಡಿಗಳು ಬಿಬಿಎಂಪಿಯ ಕಾಯ್ದೆ ಪ್ರಕಾರ ನೋಂದಣಿಯೂ ಆಗಿಲ್ಲ ಹಾಗೂ ಇನ್ನಿತರೆ ಅನುಮತಿಗಳನ್ನೂ ಪಡೆದಿಲ್ಲ ಎಂದು ಪಶುಪಾಲನಾ ವಿಭಾಗ ನೋಟಿಸ್‌ನಲ್ಲಿ ತಿಳಿಸಿದೆ.

ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳ ಮೂಲಕ ಪ್ರಾಣಿಗಳನ್ನು ಕತ್ತರಿಸುವುದನ್ನು ಹಲಾಲ್‌ ಕಟ್‌ ಎನ್ನಲಾಗುತ್ತದೆ. ಈ ರೀತಿ ಹಲಾಲ್‌ ರೀತಿಯಲ್ಲೆ ಆಹಾರ ತಯಾರಿಸಲಾಗುತ್ತಿದೆ ಎಂಬುದನ್ನು ಪ್ರಮಾಣೀಕರಿಸಲು ಖಾಸಗಿ ಸಂಸ್ಥೆಯೊಂದು ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ. ಇದೇ ವೇಳೆ ಆಹಾರವಲ್ಲ ಇನ್ನಿತರೆ ವಸ್ತುಗಳಿಗೂ ಹಲಾಲ್‌ ಸರ್ಟಿಫಿಕೇಟ್‌ ನೀಡಲಾಗುತ್ತಿದೆ.

ಇದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದು, ಝಟ್ಕಾ ಕಟ್‌ ಮಾಂಸವನ್ನೇ ಸೇವಿಸಬೇಕು ಎಂದು ಅನೇಕರು ವಾದಿಸಿದ್ದರು. ಅನೇಕ ವರ್ಷಗಳಿಂದ ಈ ವಿವಾದ ಇತ್ತಾದರೂ ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಾಬ್‌ ವಿವಾದದ ನಂತರ ಈ ವಿಚಾರವೂ ಬೆಳಕಿಗೆ ಬಂದಿತು. ಯುಗಾದಿ ನಂತರ ವರ್ಷತೊಡಕಿನ ಸಂದರ್ಭದಲ್ಲಿ ಮುಸ್ಲಿಮರು ಕತ್ತರಿಸಿದ ಹಲಾಲ್‌ ಮಾಂಸ ಸೇವಿಸದೆ, ಹಿಂದುಳು ಕತ್ತರಿಸಿದ ಝಟ್ಕಾ ಮಾಂಸವನ್ನೇ ಖರೀದಿಸಬೇಕು ಎಂದು ಪ್ರಶಾಂತ್‌ ಸಂಬರಗಿ, ಪುನೀತ್‌ ಕೆರೆಹಳ್ಳಿ ಸೇರಿ ಅನೇಕರು ಅಭಿಯಾನ ನಡೆಸಿದ್ದರು.

ಝಟ್ಕಾ ಕಟ್‌ ಮಾಡುವ ಸಲುವಾಗಿಯೇ ಮುನೇಗೌಡ ಎನ್ನುವವರು ಕೆಲ ವರ್ಷಗಳಿಂದ ಬೆಂಗಳೂರಿನ ಅನೇಕ ಕಡೆಗಳಲ್ಲಿ ಹಿಂದವೀ ಮೀಟ್‌ ಮಾರ್ಟ್‌ ಉದ್ಯಮ ಆರಂಭಿಸಿದ್ದಾರೆ. ಯುಗಾದಿ ಸಂದರ್ಭದಲ್ಲಿ ಈ ಉದ್ಯಮಕ್ಕೆ ಉತ್ತಮ ವ್ಯಾಪಾರವಾಗಿತ್ತು ಎಂಬ ವರದಿಗಳೂ ಇದ್ದವು. ಇದೀಗ ಏಪ್ರಿಲ್‌ 12ರಂದು ಹಿಂದವೀ ಮೀಟ್‌ ಮಾರ್ಟ್‌ಗೆ ಬಿಬಿಎಂಪಿ ನೋಟಿಸ್‌ ನೀಡಿದೆ.

ಪಾಲಿಸದಿದ್ದರೆ ಅಂಗಡಿ ಬಂದ್

‌ಹಿಂದವಿ ಮೀಟ್‌ ಮಾರ್ಟ್‌ಗೆ ಬಿಬಿಎಂಪಿ ಪಶುಪಾಲನಾ ವಿಭಾಗ ನೋಟಿಸ್‌ ನೀಡಿದೆ. ಬಿಬಿಎಂಪಿ ಪರವಾನಗಿ ಪಡೆಯದೆ ಅಂಗಡಿಗಳನ್ನು ನಡೆಸಲಾಗುತ್ತಿದೆ. ಕೆಎಂಸಿ ಕಾಯ್ದೆ 1976ರ ಕಲಂ 353ರ ಪ್ರಕಾರ ಕಾನೂನು ಉಲ್ಲಂಘನೆ ಮಾಡಿರುವುದರಿಂದ ತಕ್ಷಣವೇ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಬೇಕು. ಈ ಪತ್ರ ತಲುಪಿದ ಏಳು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ ಉದ್ಯಮವನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಹಾನಗರ ಪಾಲಿಕೆ ಪರವಾನಗಿ ಇಲ್ಲದಿರುವುದು ಹಾಗೂ ಪಾಲಿಕೆಯ ಅಧಿಕೃತ ಪ್ರಮಾಣಪತ್ರ ಇಲ್ಲದಿರುವುದನ್ನು ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಹಿಂದವೀ ಮೀಟ್‌ ಮಾರ್ಟ್‌ ವಿಳಾಸಕ್ಕೆ ನೀಡಿರುವ ನೋಟಿಸ್‌ನಲ್ಲಿ ನಮೂದು ಮಾಡಲಾಗಿದೆ.

ಪ್ರತಿ ವರ್ಷ ಪರವಾನಗಿ ಶುಲ್ಕ ವಿವರ
ಎಲ್ಲ ಕಾನೂನು ಪಾಲಿಸುತ್ತೇವೆ

ನೋಟಿಸ್‌ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದವೀ ಮೀಟ್‌ ಮಾರ್ಟ್‌ ಮಾಲೀಕ ಮುನೇಗೌಡ, ನಾವು ಸಂವಿಧಾನಾತ್ಮಕವಾಗಿ ಕೆಲಸ ಮಾಡುತ್ತೇವೆ. ಬಿಬಿಎಂಪಿಯವರು ನೋಟಿಸ್‌ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲ ಪರವಾನಗಿಗಳನ್ನು ಪಡೆಯಲು ಈಗಾಗಲೆ ಅರ್ಜಿ ಸಲ್ಲಿಸಿದ್ದೇವೆ, ಸದ್ಯದಲ್ಲೆ ಎಲ್ಲವೂ ಲಭಿಸುತ್ತದೆ ಎಂದು ತಿಳಿಸಿದ್ದಾರೆ.

ಮುನೇಗೌಡಗೆ ಕೊಲೆ ಬೆದರಿಕೆ?

ಒಂದು ವಾರದಿಂದ ಗುಂಪೊಂದು ಮುನೇಗೌಡರನ್ನು ಹಿಂಬಾಲಿಸುತ್ತಿದ್ದು, ಹತ್ಯೆಗೆ ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಂಗಳೂರಿನ ಏಳು ಕಡೆಗಳಲ್ಲಿ ಹಿಂದವೀ ಮೀಟ್ ಮಾರ್ಟ್ ಮಳಿಗೆಗಳನ್ನು ತೆರೆಯಲಾಗಿದೆ. ಭವಿಷ್ಯದಲ್ಲಿ ಬಿಬಿಎಂಫಿಯ ಎಲ್ಲ ವಾರ್ಡ್‌ಗಳಲ್ಲಿ, ಎಲ್ಲ ತಾಲೂಕುಗಳಲ್ಲೂ ತೆರೆಯುವ ಯೋಜನೆಯಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮಳಿಗೆಗಳಿಗೆ ಸಿಸಿಟಿವಿ ಅಳವಡಿಸಿರುವ ಮುನೇಗೌಡ, ಭದ್ರತೆ ಕೋರಿ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

https://vistaranews.com/wp-content/uploads/2022/04/Munegowda.mp4
Exit mobile version