Site icon Vistara News

40% Commission : ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್‌; ಆಗ ಶಾಸಕರು ಈಗ ಅಧಿಕಾರಿಗಳಿಂದ ವಸೂಲಿ!

40% Commission

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್‌ (40% Commission) ಬಾಂಬ್ ಸಿಡಿಸಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (Karnataka State Contractors Association) ಅಧ್ಯಕ್ಷ ಕೆಂಪಣ್ಣ, (Contractor Kempanna) ಇದೀಗ ಕಾಂಗ್ರೆಸ್‌ ಸರ್ಕಾರದ (Congress Government) ಮೇಲೂ ಅದನ್ನೇ ಪ್ರಯೋಗ ಮಾಡಿದ್ದಾರೆ. ಸರ್ಕಾರ ಬದಲಾದರೂ ಕಮಿಷನ್‌ ಪದ್ಧತಿ ಮಾತ್ರ ಬದಲಾಗಿಲ್ಲ. ಹಿಂದೆ ನೇರವಾಗಿ ಶಾಸಕರು ಕೇಳುತ್ತಿದ್ದರೆ, ಈಗ ಅಧಿಕಾರಿಗಳೇ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷರಾಗಿರುವ ಕೆಂಪಣ್ಣ ಅವರು ಗುರುವಾರ ಮಾಧ್ಯಮ ಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆಪಾದನೆಗಳನ್ನು ಮಾಡಿದರು. ಬಿಜೆಪಿ ಬಳಿಕ, ಕಾಂಗ್ರೆಸ್ ಸರ್ಕಾರದಲ್ಲೂ 40 ಪರ್ಸೆಂಟ್ ಕಮಿಷನ್ ಮುಂದುವರೆದಿದೆ ಎಂದು ಬಾಂಬ್ ಸಿಡಿಸಿದರು.

ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರು ನೇರವಾಗಿ ಹಣ ಕೇಳುತ್ತಿದ್ದರು. ಈಗ ಅಧಿಕಾರಿಗಳೇ ನೇರವಾಗಿ ಹಣ ಕೇಳುತ್ತಿದ್ದಾರೆ. ಪ್ರತಿ ಟೆಂಡರ್ ನಲ್ಲೂ ಹಣ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ಸದ್ಯದಲ್ಲೇ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳ ಹಣದ ಬೇಡಿಕೆ ದಾಖಲೆ ಬಿಡುಗಡೆ ಮಾಡುವುದಾಗಿ ಕೆಂಪಣ್ಣ ತಿಳಿಸಿದರು.

ಪ್ಯಾಕೇಜ್‌ ಟೆಂಡರ್‌ಗೆ ಆಕ್ಷೇಪ

ರಾಜ್ಯದಲ್ಲಿ ವಿವಿಧ ಇಲಾಖೆಯಲ್ಲಿ ಹೆಚ್ಚುತ್ತಿರುವ ಪ್ಯಾಕೇಜ್ ಟೆಂಡರ್ ವ್ಯವಸ್ಥೆಯನ್ನು ಕೆಂಪಣ್ಣ ಆಕ್ಷೇಪಿಸಿದರು. ಕೂಡಲೇ ಸರ್ಕಾರ ಪ್ಯಾಕೇಜ್ ಟೆಂಡರ್ ಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈಗಾಗಲೇ ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಪ್ಯಾಕೇಜ್ ಟೆಂಡರ್ ರದ್ದುಮಾಡುವಂತೆ ಮನವಿ ಮಾಡಿದ್ದೇವೆ. ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

ಪ್ಯಾಕೇಜ್‌ ಟೆಂಡರ್‌ ವಿಚಾರದಲ್ಲಿ ಮುಖ್ಯ ಎಂಜಿನಿಯರ್ ಅವರನ್ನು ಪ್ರಶ್ನೆ ಮಾಡಿದರೆ ಮೇಲಾಧಿಕಾರಿಗಳ ಕಡೆ ಕೈ ತೋರಿಸುತ್ತಾರೆ. ಅವರನ್ನು ಕೇಳಿದರೆ ಸಚಿವರು, ಶಾಸಕರ ಕಡೆಗೆ ಬೊಟ್ಟು ಮಾಡಿ ತೋರಿಸ್ತಾರೆʼʼ ಎಂದು ಕೆಂಪಣ್ಣ ಆಕ್ಷೇಪಿಸಿದರು.

ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೆಂಗಳೂರು ‌ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಮಾಡಿರುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗಿದೆ. ಇದು ನೆರೆ ರಾಜ್ಯದ ಗುತ್ತಿಗೆ ಅನುಕೂಲ ಮಾಡಿಕೊಡಲು ಮಾಡಿದ ಪ್ಯಾಕೇಜ್ ಆಗಿದೆ ಎಂದು ಅವರು ಹೇಳಿದರು.

ʻʻಪ್ಯಾಕೇಜ್ ಟೆಂಡರ್ ಪದ್ಧತಿಯಿಂದ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ. ತಮ್ಮ ಅಪ್ತರಾದ ಗುತ್ತಿಗೆದಾರರಿಗೆ ಕಾಮಗಾರಿ‌ ನೀಡಲು ಮುಂದಾಗಿದ್ದಾರೆ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗಿದೆʼʼ ಎಂದು ಹೇಳಿದ ಕೆಂಪಣ್ಣ ಅವರು, ಎಲ್ಲಾ ರೀತಿಯ ಕಾಮಗಾರಿಗಳ ಟೆಂಡರ್ ಮೂಲಕ ಹಂಚಿಕೆ ಮಾಡಿದರೆ ನ್ಯಾಯ ಸಿಗುತ್ತದೆ ಎಂದರು.

ʻʻಕಳೆದ ಒಂದು ವಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ 300 ಕೋಟಿ ಪ್ಯಾಕೇಜ್ ಟೆಂಡರನ್ನು ಆಹ್ವಾನಿಸಲಾಗಿದೆ. ಹೀಗಾಗಿ ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ ಎಂದು ಹೇಳಿದ ಅವರು,. ʻʻಪ್ಯಾಕೇಜ್ ಟೆಂಡರ್ ರದ್ದು ಮಾಡದೇ ಇದ್ದರೆ ಹೋರಾಟ ಮಾಡಲು ಕರೆ ಕೊಡುತ್ತೇವೆʼʼ ಎಂದು ಎಚ್ಚರಿಸಿದರು.

ಇದನ್ನೂ ಓದಿ: CM Siddaramaiah: ಹೌದು Mr Modi, ಇದು ನಿಮ್ದೇ ಓದಿ! ಕೇಂದ್ರದ ವಿರುದ್ಧ ಸರಣಿ ಪೋಸ್ಟ್‌ ಹಾಕಿದ ಸಿಎಂ ಸಿದ್ದರಾಮಯ್ಯ

ಮುಂದುವರಿದ ಕಮಿಷನ್‌ ಬೇಡಿಕೆ

ರಾಜ್ಯದಲ್ಲಿ 40 % ಕಮಿಷನ್‌ ಬೇಡಿಕೆ ಮುಂದುವರಿದಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಕೆಂಪಣ್ಣ ಅವರು, ʻʻನಿಮಗೆ ಕೆಲಸ ಬೇಕು ಅಂದ್ರೆ ಕಮಿಷನ್‌ ಕೊಡಿ ಎಂದು ಅಧಿಕಾರಿಗಳೇ ಕೇಳುತ್ತಿದ್ದಾರೆ. ಕಾಮಗಾರಿ ‌ಪೂರ್ಣಗೊಳಿಸಿ ಎರಡು ವರ್ಷ ಆದ್ರೂ ಹಣ ಬಿಡುಗಡೆ ಆಗಿಲ್ಲ. 40% ಕಮೀಷನ್ ಈಗಲೂ ಮುಂದುವರೆದಿದೆ. ಅಧಿಕಾರಿಗಳೇ ಈಗ ಲಂಚ ಬೇಡಿಕೆ ಇಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮೀಷನ್ ತಗೋಳ್ತಾ ಇದ್ದರು. ಈಗ ಅಧಿಕಾರಿಗಳು ಕಮೀಷನ್ ತಗೋಳ್ತಾ ಇದ್ದಾರೆʼʼ ಎಂದು ಕೆಂಪಣ್ಣ ಹೇಳಿದರು.

ನಾವು ಯಾರಿಗೂ ಹೆದರಬೇಕಾಗಿಲ್ಲ. ರಾಜ್ಯದಲ್ಲಿ 40% ಕಮೀಷನ್ ಮುಂದುವರಿದಿರುವ ಬಗ್ಗೆ ದೂರು ಕೊಡುತ್ತೇವೆ.”” ಎಂದು ಕೇಳಿದ ಕೆಂಪಣ್ಣ ಅವರು, ಬಿಬಿಎಂಪಿಯಲ್ಲಿ 15 ಚೀಫ್‌ ಇಂಜಿನಿಯರ್‌ಗಳು ಇದ್ದಾರೆ. ಅವರು ಪ್ರತಿಯೊಂದು ಟೆಂಡರ್‌ನಲ್ಲೂ ಹಣ ಕೇಳ್ತಾರೆ. ಆದರೆ ಅವರ ಹೆಸರನ್ನು ಸದ್ಯಕ್ಕೆ ಹೇಳಲ್ಲ ಎಂದರು.

ನಾವು ಕಮಿಷನ್‌ ಹಗರಣದ ತನಿಖೆ ನಡೆಸುತ್ತಿರುವ ಸಂಸ್ಥೆ ಮುಂದೆ ನಮ್ಮೆಲ್ಲ ಅಹವಾಲುಗಳನ್ನು ಹೇಳಿದ್ದೇವೆ. 9 ಸಾವಿರ ಪುಟಗಳ ಮೂಲಕ ದೂರು ಕೊಟ್ಟಿದ್ದೇವೆ. ನಾಗಮೋಹನ್ ದಾಸ್ ಕಮಿಟಿಗೂ ಪ್ರತಿ ಭ್ರಷ್ಟ ಅಧಿಕಾರಿಗಳ ಮಾಹಿತಿ ನೀಡಿದ್ದೇವೆ. ಅದರಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಗಳ ಹೆಸರು ನೀಡಿದ್ದೇವೆ ಎಂದು ಕೆಂಪಣ್ಣ ಹೇಳಿದರು.

Exit mobile version