ಬೆಂಗಳೂರು: ತಂತ್ರಜ್ಞಾನ ಎಂದರೆ ಕೇವಲ ಸಾಫ್ಟ್‌ವೇರ್ ತಂತ್ರಜ್ಞರಿಗೆ ಮಾತ್ರವಲ್ಲ, ಕಳ್ಳರನ್ನು ಬೆನ್ನುಹತ್ತಲು ಪೊಲೀಸರಿಗೂ ನೆರವಾಗುತ್ತಿದೆ ಎನ್ನುವುದಕ್ಕೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಹೊಸ ಉದಾಹರಣೆಯೊಂದು ಸಿಕ್ಕಿದೆ. ಲಾರಿಯನ್ನು ಕದ್ದ ಆಸಾಮಿಯನ್ನು ಬರೊಬ್ಬರಿ ಐವತ್ತು ಸಿಸಿಟಿವಿಗಳನ್ನು ವೀಕ್ಷಿಸುವ ಮೂಲಕ ಹಾಗೂ ಮೊಬೈಲ್ ನೆಟ್‌ವರ್ಕ್ ಟ್ರ್ಯಾಕ್ ಮಾಡುವ ಮೂಲಕ ಬಂಧಿಸಿದ್ದಾರೆ.
ಬೆಂಗಳೂರಿನ ಮಝರ್ ಸಣ್ಣಪುಟ್ಟ ವಸ್ತುಗಳು ಹಾಗೂ ವಾಹನಗಳನ್ನು ಕಳ್ಳತನ ಮಾಡಿಕೊಂಡಿದ್ದ. ಅದೇಕೊ ಒಮ್ಮೆ ದೊಡ್ಡ ಲಾಭಕ್ಕೆ ಕೈಹಾಕುವ ಮನಸ್ಸಾಯಿತು. ಬೆಂಗಳೂರಿನಲ್ಲಿ ಸರಕು ಸಾಗಣೆ ನಡೆಸುತ್ತಿದ್ದ ಐಷರ್ ಕಂಪನಿಯ ಲಾರಿಯನ್ನೇ ಕದ್ದೊಯ್ದ. ಇಷ್ಟು ದೊಡ್ಡ ವಾಹನ ಕದ್ದು ಮುಚ್ಚಿಡಲು ಸಾಧ್ಯವಿಲ್ಲವಲ್ಲ,, ಆದಷ್ಟೂ ಬೇಗ ಮಾರಾಟ ಮಾಡಲು ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಸಂಚರಿಸುತ್ತಿದ್ದ.
ಲಾರಿ ಕಳ್ಳತನ ಪ್ರಕರಣವನ್ನು ಭೇದಿಸಲೇಬೇಕಂದು ಪೊಲೀಸರು ಬರೊಬ್ಬರಿ ಐವತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒಂದರ ನಂತರ ಒಂದರಂತೆ ಫಾಲೊ ಮಾಡಿದ್ದಾರೆ. ಜತೆಗೆ, ಆರೋಪಿಯ ಮೊಬೈಲ್ ನೆಟ್‌ವರ್ಕ್ ಜಾಡನ್ನು ಹಿಡಿದು ಕೊನೆಗೂ ಕಳ್ಳನನ್ನು ಬಂಧಿಸಿ, ಐದು ಲಕ್ಷ ರೂ. ಬೆಎಬಾಳುವ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೆಲ್ಲ ಮಾನವ ಗುಪ್ತಚರರ ಮೇಲೆಯೇ ಪೊಲೀಸರು ಹೆಚ್ಚು ಅವಲಂಬಿತರಾಗುತ್ತಿದ್ದರು. ಅನೇಕ ಬಾರಿ ಕಳ್ಳರು ಸಿಕ್ಕರೂ ಸೂಕ್ತ ಸಾಕ್ಷ್ಯಾಧಾರ ಇಲ್ಲದೆ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದವು. ಇದೀಗ ಸಿಸಿಡಿವಿ ದೃಷ್ಯಾವಳಿಗಳು, ಮೊಬೈಲ್ ನೆಟ್‌ವರ್ಕ್‌ನ ಜಾಡುಗಳು ಪೊಲೀಸರ ತನಿಖಾ ಶ್ರಮವನ್ನು ಸುಲಭವಾಗಿಸುವುದರ ಜತೆಗೆ ಬಲವಾದ ಡಿಜಿಟಲ್ ಸಾಕ್ಷಿಗಳನ್ನೂ ಒದಗಿಸುತ್ತಿವೆ.