ಬೆಂಗಳೂರು: ರಾಜ್ಯ ರಾಜಧಾನಿಯ ಜೆ.ಪಿ ನಗರದ ಆರನೇ ಹಂತದ ಬಳಿ ಚೀಲ ಮತ್ತು ಬೆಡ್‌ಶೀಟ್‌ನಲ್ಲಿ ಸುತ್ತಿದ ರೀತಿಯಲ್ಲಿ ಶವ ಪತ್ತೆಯಾಗಿದೆ. ಆರ್. ಬಾಲಸುಬ್ರಮಣಿಯನ್ (67) ಮೃತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣಿಯನ್ ಅವರು ಸಂಜೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದೂ, ಬಳಿಕ ಬರುತ್ತೇನೆ ಎಂದಿದ್ದರು. ಆದರೆ, ಇದಾದ ಬಳಿಕ ಕರೆ ಮಾಡಿದರೆ ಬಾಲಸುಬ್ರಮಣಿಯನ್ ಅವರ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಹಾಗಾಗಿ, ಅವರ ಮಗ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಶವ ಪತ್ತೆಯಾಗಿರುವ ಕುರಿತು ಪೊಲೀಸರು ಮಗನಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ತಂದೆಯ ಮೃತ ದೇಹದ ಗುರುತು ಪತ್ತೆಯಾಗಿದೆ. ಶವದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಪ್ಲಾಸ್ಟಿಕ್ ಚಿಲಗಳಿಂದ ಮುಖ ಹಾಗೂ ಕಾಲುಗಳನ್ನು ಮುಚ್ಚಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾವಿನ ಕುರಿತು ಶಂಕೆ ವ್ಯಕ್ತವಾದ ಕಾರಣ ಪುತ್ರ ದೂರು ನೀಡಿದ್ದಾರೆ.
ಬಾಲಸುಬ್ರಮಣಿಯನ್ ಅವರು ಲಾರಿ ಸಂಘದ ಸೆಕ್ರೆಟರಿಯ ತಂದೆಯಾಗಿದ್ದಾರೆ. ಟ್ರಾನ್ಸ್‌ಪೋರ್ಟ್ ಉದ್ಯಮ ಹೊಂದಿರುವ ಬಾಲಸುಬ್ರಮಣಿಯನ್ ಅವರು ಇತ್ತೀಚೆಗೆ ಉದ್ಯಮದ ಉಸ್ತುವಾರಿಯನ್ನು ಮಗನಿಗೆ ನೀಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿನ ಅಸಲಿ ಕಾರಣ ತಿಳಿದುಬರಲಿದೆ.
ಇದನ್ನೂ ಓದಿ | ಆನೇಕಲ್ ಬಳಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ