ಬೆಂಗಳೂರು: ಬೆಂಗಳೂರಿನ ಬಡಾವಣೆಯೊಂದರ ರಸ್ತೆ, ಶಾಲಾ ಕಂಪೌಂಡ್ ಮೊದಲಾದ ಕಡೆಗಳಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಸ್ಸಾರಿ ( sorry) ಎಂದು ಬರೆದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದಾನೆ.
ಯಾರು ಏಕೆ ಈ ರೀತಿ ಕಂಡಕಂಡಲ್ಲಿ ಸ್ಸಾರಿ ಎಂದು ಗೀಚಿದ್ದಾರೆ ಎಂದು ಗೊತ್ತಾಗದೆ ಜನತೆ ಗಲಿಬಿಲಿಗೊಂಡರು. ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಸಮೀಪದ ರಸ್ತೆಯಲ್ಲಿ ಸಿಕ್ಕಸಿಕ್ಕಲ್ಲಿ ಸ್ಸಾರಿ ಎಂದು ಬರೆಯಲಾಗಿದೆ. ಬೆಳಗ್ಗೆ ಎದ್ದೊಡನೆ ಇದನ್ನು ಕಂಡ ಸ್ಥಳೀಯ ನಿವಾಸಿಗಳು ಕಸಿವಿಸಿಗೊಂಡು ಪೊಲೀಸರಿಗೆ ದೂರು ನೀಡಿದರು.
ಪೊಲೀಸರಿಗೂ ಇದು ಅಚ್ಚರಿ ಮೂಡಿಸಿದ್ದು, ದಾರಿಯುದ್ದಕ್ಕೂ ಸ್ಸಾರಿ ಎಂದು ಬರೆದವರ ಬೆನ್ನು ಹತ್ತಿದ್ದಾರೆ. ಪತ್ತೆಯಾದ ಬಳಿಕ ಹೆಚ್ಚಿನ ವಿವರಗಳು ಸಿಗಲಿದೆ.