ಬೆಂಗಳೂರು: ಬಿಎಂಟಿಸಿ ಬಸ್ ಬೆಂಕಿ ಹೊತ್ತು ಉರಿದಿದ್ದ ಪ್ರಕರಣದಲ್ಲಿ, ಬಿಡಿ ಕಾಸು ಸಂಬಳ ತೆಗೆದುಕೊಳ್ಳುವ ಡ್ರೈವರ್ ಮತ್ತು ತಾಂತ್ರಿಕ ಸಿಬ್ಬಂದಿಗೆ ಲಕ್ಷ ಲಕ್ಷ ದಂಡವನ್ನು ಹಾಕಲಾಗಿದೆ. ಇದರಿಂದ ಸಾರಿಗೆ ನಿಗಮವು ನೌಕರರ ಬುಡಕ್ಕೆ ಬೆಂಕಿ ಇಟ್ಟ ಹಾಗೆ ಆಗಿದೆ.
ಫೆಬ್ರವರಿ 2 ರಂದು ಸೌತ್ ಎಂಡ್ ಸರ್ಕಲ್ ಬಳಿ ಬಿಎಂಟಿಸಿ ಬಸ್‌ಗಳು ಧಗಧಗನೇ ಹೊತ್ತಿ ಉರಿದಿತ್ತು. ಅಗ್ನಿ ಅವಘಡದಿಂದ ಬಸ್ ಗಾಜು, ಚಾಲಕನ ಆಸನ, ಮಾರ್ಗ ಫಲಕ, ಬಾಗಿಲು, ಎಂಜಿನ್ ಭಾಗಗಳು ಸುಟ್ಟು ಹೋಗಿದ್ದವು. ಇದರ ಕುರಿತು ಬಿಎಂಟಿಸಿ ಆಡಿಟ್ ನಡೆಸಿ, ಆಗಿರುವ ನಷ್ಟವನ್ನು ಅಂದಾಜಿಸಿದೆ.
ಅಗ್ನಿ ಅವಘಡದಿಂದ ಆದ ನಷ್ಟವನ್ನು ಸರಿಪಡಿಸಲು ₹13,61,311 ವೆಚ್ಚವಾಗುತ್ತದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಇಷ್ಟೂ ಹಣವನ್ನು ಸಿಬ್ಬಂದಿಯಿಂದಲೇ ವಸೂಲಿ ಮಾಡಲು ಬಿಎಂಟಿಸಿ ಮುಂದಾಗಿದೆ.
ಬಿಬಿಎಂಪಿ ದಕ್ಷಿಣ ವಲಯ ಶಿಸ್ತುಪಾಲನಾ ಅಧಿಕಾರಿ ಇದೀಗ ನೋಟಿಸ್ ನೀಡಿದ್ದಾರೆ. ಚಾಲಕ ಎಂ.ಕೆ. ಕೆಂಪರಾಜು, ಸಹಾಯಕ ಕಾರ್ಯ ಅಧೀಕ್ಷಕ ಮಧುಸೂದನ, ತಾಂತ್ರಿಕ ಸಹಾಯಕ ವಿ. ಕೃಷ್ಣ, ತಾಂತ್ರಿಕ ಸಹಾಯಕ ಇಬ್ರಾಹಿಂ ಬಾಗವಾನ್, ತಾಂತ್ರಿಕ ಸಹಾಯಕ ಇರಾಹಿಂ ತಾಂಬೋಳಿ ಅವರುಗಳಿಗೆ ನೋಟಿಸ್ ನೀಡಲಾಗಿದೆ.
ಬಿಎಂಟಿಸಿ ಬಸ್ ದೋಷ ಎದುರಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಎಲೆಕ್ಟ್ರಿಕ್ ಸಂಬಂಧಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಂಸ್ಥೆಯು ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಹೀಗಾಗಿ ಇಷ್ಟೂ ಮೊತ್ತವನ್ನು ನೌಕರರೇ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಅವಘಡಕ್ಕೆ ಕೆಳಹಂತದ ನೌಕರರನ್ನ ಬಲಿಪಶು ಮಾಡುಲು ಸಾರಿಗೆ ನಿಗಮ ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ| PAYTM ಸಿಬ್ಬಂದಿಗೆ ಷೇರು ಖರೀದಿ ಆಯ್ಕೆ