ನವ ದೆಹಲಿ: 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ (bangalore serial blast) ಪ್ರಮುಖ ಆರೋಪಿ ಅಬ್ದುಲ್ ನಾಸರ್ ಮದನಿಗೆ (abdul nasser madani) ಕೇರಳಕ್ಕೆ ಭೇಟಿ ಕೊಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈತ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಕೇರಳದ ಅಧ್ಯಕ್ಷನಾಗಿದ್ದಾನೆ. ಈತ ಒಂದು ತಿಂಗಳ ಕಾಲ ಕೇರಳದಲ್ಲಿರುವ ಆತನ ಮನೆಗೆ ಭೇಟಿ ನೀಡಲಿದ್ದಾನೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠವು ಏಪ್ರಿಲ್ 17ರಂದು ಈತನಿಗೆ ಅನುಮತಿ ನೀಡಿದೆ.
ಈತನ ಕೇರಳ ಭೇಟಿಯ ಭದ್ರತಾ ವ್ಯವಸ್ಥೆಯನ್ನು ಒದಗಿಸಲು ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ತನಿಖೆಗೀಡಾಗಿ ಜಾಮೀನು ಮೇಲಿರುವ ಈತ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದ.
ಮದನಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಜಾಮೀನಿನ ಮೇಲೆ ಈತ ಜೈಲಿನಿಂದ ಹೊರಗಿದ್ದಾನೆ. ಈ ಅವಧಿಯಲ್ಲಿ ಕಾನೂನುಬಾಹಿರವಾದ ಏನನ್ನೂ ಮಾಡಿಲ್ಲ. ಹೀಗಾಗಿ ಮದನಿ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ನೀಡಬೇಕು ಎಂದಿದ್ದರು. ಬೆಂಗಳೂರಿನಿಂದ ಹೊರಗೆ ಹೋಗದಂತೆ ಈತನಿಗೆ ಜಾಮೀನು ನಿರ್ಬಂಧವಿದೆ.
ಕೇರಳದಲ್ಲಿ ಅನಾರೋಗ್ಯ ಪೀಡಿತರಾಗಿರುವ ತನ್ನ ತಂದೆಯನ್ನು ಭೇಟಿ ಮಾಡಲು ಈತ ಅವಕಾಶ ಕೋರಿದ್ದಾನೆ. ಇದಕ್ಕೆ ಮುನ್ನ 2014ರಲ್ಲಿ ಮದನಿ ಒಂದು ತಿಂಗಳ ಕಾಲಾವಕಾಶ ಪಡೆದು, ಅಸ್ವಸ್ಥರಾಗಿದ್ದ ತನ್ನ ತಾಯಿಯನ್ನು ಭೇಟಿ ಮಾಡಿದ್ದ. ಇದೀಗ ಮತ್ತೆ ಸಲ್ಲಿಸಿರುವ ಆತನ ಮನವಿಯನ್ನು 2022ರ ಸೆಪ್ಟೆಂಬರ್‌ನಲ್ಲಿ ಕೋರ್ಟ್ ತಿರಸ್ಕರಿಸಿತ್ತು. ಆತ ಮತ್ತೆ ಅರ್ಜಿ ಹಾಕಿದ್ದ.
ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ಸುಪ್ರೀಂ ಕೋರ್ಟ್‌ಗೆ 2021ರಲ್ಲಿ ಈತ ಅರ್ಜಿ ಸಲ್ಲಿಸಿದಾಗ, ಅವನು ಅಪಾಯಕಾರಿ ವ್ಯಕ್ತಿ, ಹೀಗಾಗಿ ಅನುಮತಿ ನೀಡಬಾರದು ಎಂದು ಕರ್ನಾಟಕ ಸರ್ಕಾರ ವಾದಿಸಿತ್ತು. ನಾಲ್ಕು ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ 2014ರಲ್ಲಿಯೇ ಸರ್ಕಾರ ತಿಳಿಸಿತ್ತು. ಆದರೆ ಎಂಟು ವರ್ಷ ಕಳೆದರೂ ವಿಚಾರಣೆ ಪೂರ್ತಿಯಾಗಿಲ್ಲ.
2008ರ ಬೆಂಗಳೂರು ಬಾಂಬ್ ಸ್ಫೋಟ ಸಂಚಿನಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ-1967ರ ಅಡಿಯಲ್ಲಿ 31 ಮಂದಿ ಇತರರೊಂದಿಗೆ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸ್ಫೋಟಗಳಲ್ಲಿ ಒಬ್ಬ ವ್ಯಕ್ತಿ ಸತ್ತು 20 ಮಂದಿ ಗಾಯಗೊಂಡಿದ್ದರು.