ಬೆಂಗಳೂರು: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ (Acid attack) ನಡೆದಿದೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಎರಡನೇ ಆ್ಯಸಿಡ್ ದಾಳಿ ಇದಾಗಿದೆ. 2022ರಲ್ಲಿ ಹಾಡಹಗಲೆ ಯುವತಿಯೊಬ್ಬಳ ಮೇಲೆ ಆ್ಯಸಿಡ್ ಅಟ್ಯಾಕ್ ಮಾಡಿ ಕಿರಾತಕನೊಬ್ಬ ಎಸ್ಕೇಪ್ ಆಗಿದ್ದ. ರಾಜ್ಯಾದ್ಯಂತ ಆ್ಯಸಿಡ್ ಕೇಸ್ ಭಾರೀ ಚರ್ಚೆಯಾಗಿತ್ತು. ಕಾಮಾಕ್ಷಿಪಾಳ್ಯ ಪೊಲೀಸರು ನಾಗ ಎಂಬಾತನನ್ನು ಬಂಧಿಸಿದ್ದರು. ಈಗ ಇದೇ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆ್ಯಸಿಡ್ ಅಟ್ಯಾಕ್ ನಡೆದಿದೆ.
ನಿನ್ನೆ ಭಾನುವಾರ ಮಧ್ಯಾಹ್ನ 1 ರಿಂದ 2ಗಂಟೆ ಸುಮಾರಿಗೆ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ನಾಗೇಶ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ನಾಗೇಶ್ ಪ್ರತಿ ದಿನ ಮಹಾಲಕ್ಷ್ಮಿ ಎಂಬಾಕೆ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಬಾಲಾಜಿ ಬಾರ್‌ನಲ್ಲಿ ಮದ್ಯಪಾನ ಮಾಡಿ ಊಟ ಮಾಡಿ ಹೋಗುವಾಗ ಅಪರಿಚಿತ ವ್ಯಕ್ತಿ ಹಿಂಬಾಲಿಸಿಕೊಂಡು ಬಂದಿದ್ದ. ಈ ವೇಳೆ ಬಾತ್ ರೂಮ್ ಕ್ಲೀನಿಂಗ್‌ಗೆ ಬಳಸುವ ಕೆಮಿಕಲ್ ಅನ್ನು ಪ್ಲಾಸ್ಟಿಕ್ ಬಾಟಲ್‌ವೊಂದರಲ್ಲಿ ಹಾಕಿಕೊಂಡು ಬಂದು, ಏಕಾಏಕಿ ಮುಖಕ್ಕೆ ಕೆಮಿಕಲ್ ಎರಚಿ ಕಾಲ್ಕಿತ್ತಿದ್ದ.
ಆ ನೋವಿನಲ್ಲೇ ಬೈಕ್ ಮೂಲಕ ಅಲ್ಲಿಂದ ಮನೆಗೆ ಹೋಗಿದ್ದ ನಾಗೇಶ್ ರೂಮ್‌ಮೇಟ್ ಅವಿನಾಶ್‌ಗೆ ವಿಷಯ ತಿಳಿಸಿದ್ದ. ಬಳಿಕ ನಾಗೇಶ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಲ್ಲಿ ಎಡಗಣ್ಣಿಗೆ ಗಾಯ ಆಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಯುವತಿ ವಿಚಾರಕ್ಕೆ ದಾಳಿ ನಡೆಸಿರುವ ಶಂಕೆ ಇದೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ