ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ (Actor Darshan) ಆ.28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಆರೋಪಿಗಳಿಗೆ 24ನೇ ಎಸಿಎಂಎಂ ನ್ಯಾಯಾಲಯದ ಇನ್‌ಚಾರ್ಜ್ ಕೋರ್ಟ್, ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು ಪಡಿಸಲಾಗಿತ್ತು. ಆದರೆ, ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.
8 ಕಾರಣ ನೀಡಿ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ
- ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಧೃಡ.
- ಆರೋಪಿಗಳು ಕೊಲೆಗೆ ಮೊದಲು, ನಂತರ ಪ್ರಭಾವಿಗಳ ಸಂಪರ್ಕ ಹೊಂದಿರೋದು ಬೆಳಕಿಗೆ.
- ಈ ಸಮಯದಲ್ಲಿ ಜಾಮೀನು ನೀಡಿದರೆ, ಆಮಿಷ ಹಾಗೂ ಬೆದರಿಕೆ ಹಾಕುವ ಸಾದ್ಯತೆ.
- ಇನ್ನು ಕೆಲವು ಸಾಕ್ಷಿಗಳ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ.
- ಕೆಲವು ವಸ್ತುಗಳ ಎಫ್ಎಸ್‌ಎಲ್ ವರದಿ ಬಾಕಿ ಇದೆ.
- ಇನ್ನು ಕೆಲವು ವಶ ಪಡಿಸಿಕೊಂಡ ವಸ್ತುಗಳನ್ನು ಸಿಎಫ್ಎಸ್‌ಎಲ್‌ಗೆ ಕಳುಹಿಸಿದ್ದ ವರದಿ ಬರಬೇಕಿದೆ
- ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರೋದು ತಾಂತ್ರಿಕ ಹಾಗೂ ಭೌತಿಕವಾಗಿ ದೃಢ.
- ತನಿಖೆ ಪ್ರಗತಿಯಲ್ಲಿದ್ದು ಈ ಸಮಯ ಜಾಮೀನು ನೀಡಿದರೆ ತನಿಖೆಗೆ ಅಡಚಣೆ.
ಈ ಕಾರಣಗಳನ್ನ ನೀಡಿ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ. ಹೀಗಾಗಿ ಮತ್ತೆ 14 ದಿನ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಸ್ತರಣೆ ಮಾಡಿದ್ದಾರೆ.
ಚಾರ್ಜ್ ಶೀಟ್ ಸಿದ್ಧಪಡಿಸುವ ಪ್ರಕ್ರಿಯೆ ಶುರು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೊಲೀಸರು ಶುರು ಮಾಡಿದ್ದಾರೆ. ಎಲ್ಲ ರಿಪೋರ್ಟ್‌ಗಳು ಬಂದ ಕಾರಣ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದಲ್ಲಿ ಸಿದ್ಧವಾಗಲಿರುವ ಚಾರ್ಜ್ ಶೀಟ್ 3-4 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಿದ್ಧವಾಗುವ ಸಾಧ್ಯತೆ ಇದೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಕೂಡ ಸೂಚಿಸಿದ್ದರಿಂದ ಹೈದರಾಬಾದ್‌ನ ಸಿಎಫ್‌ಎಸ್‌ಎಲ್‌ನಿಂದ ರಿಪೋರ್ಟ್ ಬಂದ ಕೂಡಲೇ ಪೊಲೀಸರು ಚಾರ್ಜ್ ಶೀಟ್ ಸಿದ್ಧಮಾಡುತ್ತಿದ್ದಾರೆ. ಪ್ರಕರಣದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ಮಂದಿಯ ಸಿಆರ್‌ಪಿಸಿ 164 ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ನ್ಯಾಯಾಧೀಶರ ಎದುರು ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ | Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಕಾರ
ಈ ಹೇಳಿಕೆಗಳು ಯಾವುದೇ ಕಾರಣಕ್ಕೂ ಬದಲಾಗಬಾರದು ಎಂಬ ಕಾರಣಕ್ಕೆ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಚಿಕ್ಕಣ್ಣ, ಯಶಸ್ ಸೂರ್ಯ, ದರ್ಶನ್ ಮನೆ ಕೆಲಸದವರು, ವಾಟರ್ ಸರ್ವೀಸ್ ಅಂಗಡಿಯವರು, ಆರೋಪಿಗಳಿಗೆ ಖುಷ್ಕ,ಬೀಡಿ, ಸಿಗರೇಟ್ ತಂದುಕೊಟ್ಟವರು, ಹೀಗೆ 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ. ಇವರೆಲ್ಲರೂ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳಾಗಿ ಪರಿಗಣನೆ ಮಾಡಲಾಗಿದೆ.