ಬೆಂಗಳೂರು: ಅಭಿಮಾನಿಗಳ ಗಾಡಿಗಳಲ್ಲಿ ದರ್ಶನ್ (Actor Darshan) ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್‌ಗೆ ಕಾನೂನು ಕಂಟಕ ಎದುರಾಗಿದ್ದು, ರೂಲ್ಸ್ ಬ್ರೇಕ್ ಮಾಡಿದರೆ ಕೇಸ್ ಬೀಳುತ್ತೆ ಎಂಬ ಎಚ್ಚರಿಕೆಯನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು (Traffic violation) ನೀಡಿದ್ದಾರೆ.
ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ಖೈದಿ ನಂಬರ್ 6106 ಅನ್ನು ನೀಡಲಾಗಿದೆ. ಈ ನಂಬರ್ ಅನ್ನೇ ಸ್ಟಿಕರ್ ಮಾಡಿಕೊಂಡಿರುವ ಫ್ಯಾನ್ಸ್ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಇದೀಗ ನಂಬರ್ ಪ್ಲೇಟ್ ಮರೆಮಾಚಿ ಸ್ಟಿಕ್ಕರ್ ಅಂಟಿಸಿದವರಿಗೆ ಸಂಕಷ್ಟ ಎದುರಾಗಿದೆ.
ಯಾವುದೇ ಕಾರಣಕ್ಕೂ ವಾಹನಗಳ ನಂಬರ್ ಪ್ಲೇಟ್ ಮರೆಮಾಚುವಂತಿಲ್ಲ. ನಂಬರ್ ಪ್ಲೇಟ್ ಇರುವ ಕಡೆ ಸ್ಟಿಕ್ಕರ್‌ಗಳನ್ನು ಅಂಟಿಸುವಂತಿಲ್ಲ. ಈ ರೀತಿ ಮಾಡಿದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಖೈದಿ ನಂಬರ್ ಸ್ಟಿಕ್ಕರ್ ಅಂಟಿಸಿ ನಂಬರ್ ಪ್ಲೇಟ್ ಮರೆ ಮಾಚಿರುವವರ ವಿರುದ್ಧ ಕೇಸ್ ದಾಖಲಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಡಿಫೆಕ್ಟಿವ್ ನಂಬರ್ ಪ್ಲೇಟ್ ಅಡಿ ಕೇಸ್ ದಾಖಲಾಗುತ್ತದೆ.
ದರ್ಶನ್ ಭೇಟಿಯಾಗಲು ಅಭಿಮಾನಿಯ ರಂಪಾಟ
ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿದೆ. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಣಾದರು.
ಇದನ್ನೂ ಓದಿ: T20 World Cup 2024: ದರ್ಶನ್ ಜೈಲಿಗೆ ಹೋದಾಗೆಲ್ಲ ವಿಶ್ವಕಪ್ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?
ಜೈಲಲ್ಲಿ ದರ್ಶನ್ ಭೇಟಿಯಾದ ನಟಿ ರಕ್ಷಿತಾ, ಪ್ರೇಮ್ ದಂಪತಿ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು (Actor Darshan) ಕೆಲ ಆಪ್ತರು ಭೇಟಿ ಮಾಡುತ್ತಿದ್ದಾರೆ. ಈ ನಡುವೆ ನಟಿ ರಕ್ಷಿತಾ, ಪ್ರೇಮ್ ದಂಪತಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಪ್ರಕರಣದ ಬಗ್ಗೆ ರಕ್ಷಿತಾ, ಪ್ರೇಮ್ ದಂಪತಿ ಬೇಸರ ಹೊರಹಾಕಿದ್ದು, ಇಂತಹ ಪ್ರಕರಣ ನಡೆಯಬಾರದಿತ್ತು ಎಂದು ಹೇಳಿದ್ದಾರೆ.
ನಟ ದರ್ಶನ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಟಿ ರಕ್ಷಿತಾ, ಈ ಘಟನೆ ನಡೆದಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದು ಹೇಳಿದರು.
ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿ, ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.
ಪ್ರಕರಣದ ಬಗ್ಗೆ ಪವಿತ್ರಾ ಗೌಡಗೆ ಏನೂ ಗೊತ್ತಿಲ್ಲ: ವಕೀಲ
ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ನ್ಯಾಯಾಂಗ ಬಂಧನದಲ್ಲಿದ್ದಾಗ ಎಲ್ಲರೂ ಚೆನ್ನಾಗಿಯೇ ಇರುತ್ತಾರೆ. ಯಾರಿಗೂ ಹಿಂಸೆ ಕೋಡಲು ಇಲ್ಲಿಗೆ ಕರೆದುಕೊಂಡು ಬರೋದಿಲ್ಲ. ಅವರ ಮನಪರಿವರ್ತನೆಯಾಗಲಿ ಎಂದು ಜೈಲಿಗೆ ಕರೆದುಕೊಂಡು ಬರಲಾಗುತ್ತದೆ. ಎಲ್ಲರೂ ಹೇಗೆ ಇರುತ್ತಾರೋ ಹಾಗೆ ಪವಿತ್ರಾ ಕೂಡ ಇರುತ್ತಾರೆ. ಅವರಿಗೆ ಸ್ಪೇಷಲ್ ಏನು ಇಲ್ಲ ಎಂದು ತಿಳಿಸಿದ್ದಾರೆ.
ಜಾಮೀನು ಅರ್ಜಿ ಯಾವಾಗ ಹಾಕಿಕೊಳ್ಳಬೇಕು ಎನ್ನುವುದಕ್ಕೆ ಕಾಯುತ್ತಿದ್ದೇವೆ. ಅದರ ಬಗ್ಗೆಯೇ ಚರ್ಚೆ ನಡೆಸಲು ಭೇಟಿ ಮಾಡಿದ್ದೆ. ಅವರಿಗೆ ಪ್ರಕರಣದ ಬಗ್ಗೆಯೇ ಏನೂ ತಿಳಿದಿಲ್ಲ. ಅವರಿಗೆ ಶಾಕ್ ಆಗಿದೆ. ಯಾವಾಗಲೂ ತಪ್ಪು ಮಾಡಿರಲಿಲ್ಲ, ಈ ರೀತಿಯಾದಾಗ ನೋವಾಗುತ್ತೆ. ತಪ್ಪು ಮಾಡಿರುವವರಿಗಾದರೆ ಅದರ ಅರಿವಿರುತ್ತದೆ. ನಾನು ಏನೂ ಮಾಡಿಲ್ಲ, ನನಗೆ ಯಾಕೆ ಇಂತ ಪರಿಸ್ಥಿತಿ ಎಂದು ಶಾಕ್‌ನಲ್ಲಿದ್ದಾರೆ. ಜುಲೈ 4ರ ಬಳಿಕ ಜಾಮೀನು ಅರ್ಜಿ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ