Site icon Vistara News

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

Actor Darshan

ಬೆಂಗಳೂರು: ನಟ ದರ್ಶನ್‌ (Actor Darshan) ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ (murder case) ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿವೆ. ಈಗಾಗಲೇ ಮತ್ತಿಬ್ಬರು ಆರೋಪಿಗಳು ಚಿತ್ರದುರ್ಗದ ಪೊಲೀಸರಿಗೆ ಶರಣಾಗಿದ್ದು, ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಈ ನಡುವೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಕರೆತರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೂನ್ 8ರ ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಬಳಿ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಕಾರಿನ ಮುಂಭಾಗ ಡ್ರೈವರ್ ರವಿ ಹಾಗೂ ರಾಘವೇಂದ್ರ ಕುಳಿತಿದ್ದರು. ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿರುವ ಈ ಗ್ಯಾಂಗ್‌ ವಿಐಪಿ ಕಾರ್ಡ್ ತೋರಿಸಿ ಹೋಗಿದ್ದಾರೆ.

ಮಾತ್ರವಲ್ಲದೇ ದರ್ಶನ್ ಸಂಘದ ಅಧ್ಯಕ್ಷ ಎಂದು ಬಿಲ್ಡಪ್ ಕೊಟ್ಟು ಹೋಗಿರುವ ದೃಶ್ಯವೆಲ್ಲವೂ ಹಿರಿಯೂರು ಗುಯಿಲಾಳ್ ಟೋಲ್ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನುಳಿದ ನಾಲ್ಕು ಮಂದಿ ಜತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಜೂನ್‌ 9ರ ಬೆಳಗಿನ ಜಾವ 4:30ಕ್ಕೆ ಚಿತ್ರದುರ್ಗದತ್ತ ಚಾಲಕ ರವಿ ವಾಪಸ್‌ ಆಗಿದ್ದಾನೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್

ಶರಣಾಗತಿಯಾಗಿದ್ದ ಆರೋಪಿಗಳು

ಇನ್ನೂ ತಾವೇ ಸರೆಂಡರ್ ಆಗಿರುವ ಕಾರು ಚಾಲಕ ರವಿ ಜತೆಗೆ ಹೇಮಂತ್ ಹಾಗೂ ಪುನೀತ್‌ರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಕೊಂಡು ಬಂದಾಗ ರವಿ ಕಾರು ಚಲಾಯಿಸಿದ್ದ. ಸ್ಕಾರ್ಪಿಯೋ ಮಾಲೀಕ ಪುನೀತ್ ಹಾಗೂ ಶವ ಸಾಗಿಸಿದ ಬಳಿಕ ಹೇಮಂತ್ ಕಾರನ್ನು ವಾಶ್ ಮಾಡಿದ್ದ. ಇದೀಗ ಈ ಮೂವರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.

ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಬೆಂಗಳೂರು/ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಸೇರಿ ಹಲವರು ಸೆರೆಯಾಗಿದ್ದು, ಇದೀಗ ಮತ್ತಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಅನುಕುಮಾರ್ ಅಲಿಯಾಸ್‌ ಅನು, ಜಗದೀಶ್ ಅಲಿಯಾಸ್‌ ಜಗ್ಗು ಸರೆಂಡರ್ ಆಗಿದ್ದಾರೆ.

ಚಿತ್ರದುರ್ಗದ ಡಿವೈಎಸ್‌ಪಿ ಪಿ.ಕೆ ದಿನಾಕರ್ ಅವರಿಗೆ ಶರಣಾಗಿದ್ದಾರೆ. ಅನು ಚಿತ್ರದುರ್ಗದ ಸಿಹಿನೀರ ಹೊಂಡ ನಿವಾಸಿಯಾದರೆ, ಜಗದೀಶ್ ಚಿತ್ತದುರ್ಗದ ರೈಲ್ವೆ ಸ್ಟೇಶನ್ ಏರಿಯಾ ನಿವಾಸಿಯಾಗಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿ ಒಟ್ಟು 16 ಮಂದಿ ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ.

ಪವಿತ್ರಗೌಡ ನೋಡಲು ಬಂದ ಸಂಬಂಧಿಕರು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಗೌಡ ಭೇಟಿಗೆ ಆಕೆಯ ಸಹೋದರಿ ಹಾಗೂ ಸಂಬಂಧಿ ಬಂದಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಕೊಲೆ ಆರೋಪಿ ಪವಿತ್ರಗೌಡ ಭೇಟಿಗೆ ಪೊಲೀಸರು ನಿರಾಕರಿಸಿದರು. ಫೋನ್ ಮಾಡಿಸಿ ಒಳಗಡೆ ಹೋಗಲು ಪ್ರಯತ್ನಿಸಿದರು. ಆದರೆ ಬಂದ ದಾರಿಗೆ ಸುಂಕ ಎಲ್ಲ ಎಂಬಂತೆ ಬರಿಗೈಯ್ಯಲ್ಲಿ ಹೋದರು. ಈ ಮೊದಲು ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾಗ ಠಾಣೆಯಲ್ಲಿ ಭೇಟಿ ಮಾಡುವಂತೆ ಸೂಚಿಸಿ ಕಳಿಸಲಾಗಿತ್ತು. ಈಗ ಠಾಣೆಗೆ ಬಂದು ಮನವಿ ಮಾಡಿಕೊಂಡರು ಪವಿತ್ರಗೌಡ ಭೇಟಿಗೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version