ಬೆಂಗಳೂರು/ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ (Actor Darshan) ಸೇರಿ ಹಲವರು ಸೆರೆಯಾಗಿದ್ದು, ಇದೀಗ ಮತ್ತಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗು ಸರೆಂಡರ್ ಆಗಿದ್ದಾರೆ.
ಚಿತ್ರದುರ್ಗದ ಡಿವೈಎಸ್‌ಪಿ ಪಿ.ಕೆ ದಿನಾಕರ್ ಅವರಿಗೆ ಶರಣಾಗಿದ್ದಾರೆ. ಅನು ಚಿತ್ರದುರ್ಗದ ಸಿಹಿನೀರ ಹೊಂಡ ನಿವಾಸಿಯಾದರೆ, ಜಗದೀಶ್ ಚಿತ್ತದುರ್ಗದ ರೈಲ್ವೆ ಸ್ಟೇಶನ್ ಏರಿಯಾ ನಿವಾಸಿಯಾಗಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 16 ಮಂದಿ ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ.
ಪವಿತ್ರಗೌಡ ನೋಡಲು ಬಂದ ಸಂಬಂಧಿಕರು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಗೌಡ ಭೇಟಿಗೆ ಆಕೆಯ ಸಹೋದರಿ ಹಾಗೂ ಸಂಬಂಧಿ ಬಂದಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಕೊಲೆ ಆರೋಪಿ ಪವಿತ್ರಗೌಡ ಭೇಟಿಗೆ ಪೊಲೀಸರು ನಿರಾಕರಿಸಿದರು. ಫೋನ್ ಮಾಡಿಸಿ ಒಳಗಡೆ ಹೋಗಲು ಪ್ರಯತ್ನಿಸಿದರು. ಆದರೆ ಬಂದ ದಾರಿಗೆ ಸುಂಕ ಎಲ್ಲ ಎಂಬಂತೆ ಬರಿಗೈಯ್ಯಲ್ಲಿ ಹೋದರು. ಈ ಮೊದಲು ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾಗ ಠಾಣೆಯಲ್ಲಿ ಭೇಟಿ ಮಾಡುವಂತೆ ಸೂಚಿಸಿ ಕಳಿಸಲಾಗಿತ್ತು. ಈಗ ಠಾಣೆಗೆ ಬಂದು ಮನವಿ ಮಾಡಿಕೊಂಡರು ಪವಿತ್ರಗೌಡ ಭೇಟಿಗೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್
ಆರೋಪಿಗಳ ಫೋನ್ ಜಪ್ತಿ, ಎಫ್‌ಎಸ್‌ಎಲ್‌ಗೆ ರವಾನೆ
ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್ (Actor Darshan) ಮತ್ತು ಆತನ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ಇದೀಗ ತನಿಖೆಯಲ್ಲಿ ಮಹತ್ವದ ಸಾಕ್ಷ್ಯ ಇದೆ ಎನ್ನಲಾದ ಎರಡು ಮೊಬೈಲ್ ಫೋನ್‌ಗಳನ್ನು ನಾಶ ಮಾಡಿದ್ದಾರೆ (Darshan Arrested) ಎನ್ನಲಾಗಿದೆ.
ರೇಣುಕಾಸ್ವಾಮಿಯ ಮೃತದೇಹವನ್ನು ಸುಮ್ಮನಹಳ್ಳಿಯ ರಾಜಕಾಲುವೆಗೆ ಎಸೆದು, ಬಳಿಕ ಅದೇ ಜಾಗದಲ್ಲಿ 2 ಮೊಬೈಲ್ ಮೋರಿಗೆ ಎಸೆದಿದ್ದಾರೆ. ಒಂದು ಮೊಬೈಲ್ ರೇಣುಕಾಸ್ವಾಮಿಗೆ ಸೇರಿದ್ದು, ಇನ್ನೊಂದು ಓರ್ವ ಆರೋಪಿಯ ಮೊಬೈಲ್ ಫೋನ್ ಅನ್ನು ಎಸೆದು ಹೋಗಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಇನ್ನೂ ಬಿಸಾಡಿರುವ ಮೊಬೈಲ್‌ನಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿರುವ ವಿಡಿಯೊವನ್ನು ಆರೋಪಿಗಳು ಚಿತ್ರೀಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಕೊಲೆಯಾದ ರೇಣುಕಾಸ್ವಾಮಿ ಫೋನ್ ಜತೆಗೆ ಆರೋಪಿಯೊಬ್ಬನ ಮೊಬೈಲ್ ಫೋನ್‌ನನ್ನು ಮೋರಿಗೆ ಎಸೆಯಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಹಲವರು ಬಂಧಿಯಾಗಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳಿಂದ ಒಟ್ಟು 14 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. 14 ಮೊಬೈಲ್‌ಗಳ ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಮೊಬೈಲ್‌ನಲ್ಲಿ ಹಲವಾರು ಮಾಹಿತಿಗಳು ಡಿಲೀಟ್ ಆಗಿರುವ ಅನುಮಾನ ಇದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಡಾಟಾ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ (FSL) ರವಾನೆ ಮಾಡಲಾಗಿದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ