Site icon Vistara News

Actor K Shivaram : ನಟ ಶಿವರಾಮ್‌ ಅಂತ್ಯಕ್ರಿಯೆ ವಿಚಾರದಲ್ಲಿ ಸಂಘರ್ಷ; ಸಿಡಿದೆದ್ದ ವಾಣಿ ಶಿವರಾಮ್‌, ಸಚಿವ ಖರ್ಗೆಗೇ ಘೇರಾವ್‌

Actor K Shivaram Ravindra Kalakshetra BY Vijayendra

ಬೆಂಗಳೂರು: ಗುರುವಾರ ನಿಧನರಾದ ʻಬಾ ನಲ್ಲೆ ಮಧುಚಂದ್ರಕೆʼ (Baa Nalle Madhuchandrake) ಖ್ಯಾತಿಯ ನಟ, ಮೊದಲ ಬಾರಿ ಕನ್ನಡದಲ್ಲೇ ಐಎಎಸ್‌ ಪರೀಕ್ಷೆ ಬರೆದು ಹುದ್ದೆ ಗಿಟ್ಟಿಸಿಕೊಂಡ ಸಾಧಕ, ದಲಿತ ಹೋರಾಟದ ಮುಂಚೂಣಿ ನಾಯಕ ಕೆ. ಶಿವರಾಮ್‌ (Actor K Shivaram) ಅವರ ಅಂತ್ಯಕ್ರಿಯೆಗೆ ಸಂಬಂಧಿಸಿ ಈಗ ಸಂಘರ್ಷ ಭುಗಿಲೆದ್ದಿದೆ. ಕೆ. ಶಿವರಾಮ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ (Anthima Darshana) ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ನಡೆಯುತ್ತಿದೆ. ಆ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ಅವರಿಗೂ ಮುತ್ತಿಗೆ ಹಾಕಲಾಯಿತು.

ಕೆ. ಶಿವರಾಮ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ನಡೆಸಲು ಅವಕಾಶ ನೀಡಬೇಕು ಎಂದು ಕುಟುಂಬಿಕರು ಮತ್ತು ಅಭಿಮಾನಿಗಳು ಕೋರಿದ್ದರು. ಆದರೆ, ಸರ್ಕಾರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ಶಿವರಾಮ್‌ ಅವರ ಪತ್ನಿ ವಾಣಿ ಶಿವರಾಮ್‌, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಸಿಟ್ಟಿಗೆದ್ದಿದ್ದಾರೆ. ಇದರಿಂದ ಅಂತಿಮ ದರ್ಶನದ ವೇಳೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ಓದಿ: K Shivaram: ಕೆ ಶಿವರಾಮ್ ಬಯೋಪಿಕ್‌ಗೆ `ಅಪ್ಪು’ ಗ್ರೀನ್​ ಸಿಗ್ನಲ್​ ಕೊಟ್ಟಿದ್ರಂತೆ!

ಅಂತಿಮ ದರ್ಶನಕ್ಕೆ ಮುನ್ನ ಮೆರವಣಿಗೆ

ಗುರುವಾರ ಎಚ್‌ಸಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶಿವರಾಮ್‌ ಅವರ ಪಾರ್ಥಿವ ಶರೀರವನ್ನು ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌ನಲ್ಲಿ ಮೋದಿ ಆಸ್ಪತ್ರೆ ಸಮೀಪ ಇರುವ ಮನೆಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದೆ.

ಅಭಿಮಾನಿಗಳ ಜೈ ಭೀಮ್‌ ಘೋಷಣೆ, ಕಣ್ಣೀರಿನ ನಡುವೆ ಪಾರ್ಥಿವ ಶರೀರವನ್ನು ಮನೆಯಿಂದ ನವರಂಗ್, ರಾಮ ಮಂದಿರ, ರಾಜ್ ಕುಮಾರ್ ರಸ್ತೆ, ಸುಜಾತ, ಕೋಡೆ ಸರ್ಕಲ್, ಕಾರ್ಪೋರೇಶನ್‌ ವೃತ್ತದ ಮೂಲಕ ರವೀಂದ್ರ ಕಲಾ ಕ್ಷೇತ್ರಕ್ಕೆ ತಲುಪಿದ್ದು ಅಲ್ಲಿ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಮಾಡಿ ನಮನ ಸಲ್ಲಿಸುತ್ತಿದ್ದಾರೆ. ಸಂಜೆ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ.

ಛಲವಾದಿ ಮಹಾ ಸಭಾ ಕಟ್ಟಡದ ಬಳಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿಕೆ

ಶಿವರಾಮ್‌ ಕುಟುಂಬಿಕರು ಮತ್ತು ಛಲವಾದಿ ಮಹಾಸಭಾದ ಪದಾಧಿಕಾರಿಗಳು ಸರ್ಕಾರವೇ ಶಿವರಾಮ್‌ ಅವರ ಅಂತ್ಯಕ್ರಿಯೆಗೆ ಜಾಗ ಒದಗಿಸಬೇಕು, ಛಲವಾದಿ ಮಹಾಸಭಾದ ಜಾಗದಲ್ಲಿ ಅವಕಾಶ ನೀಡಬೇಕು ಎಂದು ಕೋರಿದ್ದರು. ಆದರೆ, ಸರ್ಕಾರ ಒಪ್ಪದೆ ಇರುವುದರಿಂದ ಅವರು ಆಕ್ರೋಶಿತರಾಗಿದ್ದಾರೆ.

ಕೆ ಶಿವರಾಂ ಅವರು ಒಬ್ಬ ಮಹಾನ್ ವ್ಯಕ್ತಿ.. ಇವತ್ತು ಅವ್ರಿಗೆ ಅಂತ್ಯ ಸಂಸ್ಕಾರಕ್ಕೆ ಜಾಗ ಕೇಳುತ್ತಿದ್ದೇವೆ. ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಂತ್ಯ ಸಂಸ್ಕಾರಕ್ಕೆ ಜಾಗ ಕೊಟ್ಟಿಲ್ಲ ಅಂದ್ರೆ ವಿಧಾನ ಸೌದದಲ್ಲಿ ಪ್ರತಿಭಟನೆ ಮಾಡುತ್ತೇವೆʼ ಎಂದು ಛಲವಾದಿ ಸಂಘದವರು ಸರ್ಕಾರಕ್ಕೆ ಎಚ್ಚರಿ ನೀಡಿದ್ದಾರೆ.

ಈ ನಡುವೆ, ಅಂತಿಮ ದರ್ಶನ‌ ಪಡೆಯಲು ಬಂದ ಬಿಬಿಎಂ‌ಪಿ ಅಧಿಕಾರಿಗಳು ಹಾಗೂ IPS ಅಧಿಕಾರಿಗಳಿಗೆ ಛಲವಾದಿ ಮಹಾಸಭಾ ಸದಸ್ಯರು ಘೇರಾವ್‌ ಹಾಕಿದ್ದಾರೆ.

ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಛಲವಾದಿ ಮಹಾಸಭಾದ ಆವರಣದಲ್ಲೇ ಅಂತ್ಯಕ್ರಿಯೆಗೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದ ಶಿವರಾಮ್‌ ಅಭಿಮಾನಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜತೆಗೆ ಜೈ ಭೀಮ್‌ ಘೋಷಣೆ ಮೊಳಗಿಸಿದರು. ಕೆ ಶಿವರಾಂ ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದಾರೆ.

ಪ್ರಿಯಾಂಕ್‌ ಖರ್ಗೆ ಮೇಲೆ ಸಿಡಿದೆದ್ದ ವಾಣಿ ಶಿವರಾಮ್‌

ಈ ನಡುವೆ, ರಾಜ್ಯ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅಂತಿಮ ದರ್ಶನಕ್ಕೆ ಆಗಮಿಸಿದಾಗ ಶಿವರಾಮ್‌ ಅವರ ಪತ್ನಿ ವಾಣಿ ಶಿವರಾಮ್‌ ಅವರು ಸಿಟ್ಟಿಗೆದ್ದರು. ಆಗ ಮಹಾಸಭಾ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವ ವಿಚಾರವೂ ಪ್ರಸ್ತಾಪವಾಯಿತು. ಪ್ರಿಯಾಂಕ್ ಖರ್ಗೆ ಅವರು ಹತ್ತಿರ ಬಂದಾಗ ಅವರನ್ನು ನೋಡೋ ರೈಟ್ಸ್ ನಿಮಗಿಲ್ಲ ಎಂದು ನಟ ಶಿವರಾಮ್ ಪತ್ನಿ ಹೇಳಿದರು. ಪ್ರಿಯಾಂಕ್‌ ಖರ್ಗೆ ಅವರು ನಿಯಮಗಳ ಬಗ್ಗೆ ಮಾತನಾಡಿದಾಗ ಶಿವರಾಮ್‌ ಆಪ್ತರು ಆಕ್ರೋಶ ವ್ಯಕ್ತಪಡಿಸಿದರು.

Exit mobile version