Site icon Vistara News

Actor Prakash Raj : ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ-ಅಮ್ಮನಿಗೆ ಹುಟ್ಟಿದ್ದು; ನಟ ಪ್ರಕಾಶ್‌ ರಾಜ್‌ ಹೇಳಿಕೆ

prakash Raj

ಬೆಂಗಳೂರು: ʻʻನಾನು ಸನಾತನ ಧರ್ಮಕ್ಕೆ (Sanathana Dharma) ಹುಟ್ಟಿಲ್ಲ. ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ (Born to Father and mother). ನಾನು ಧರ್ಮದ ವಿರುದ್ಧ ಅಲ್ಲ. ಪ್ರಧಾನಿ ನರೇಂದ್ರ ಮೋದಿಯ (PM Narendra Modi_ ವಿರುದ್ಧʼ- ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ (Actor Prakash Raj). ಹಿಂದು ಧರ್ಮದ ವಿಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ Just Asking ಹೆಸರಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಪ್ರಕಾಶ್‌ ರಾಜ್‌ ಸನಾತನ ಧರ್ಮ ವಿವಾದಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಗೌರಿ ಮೆಮೋರಿಯಲ್ ಟ್ರಸ್ಟ್ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ (Gowri Lankesh Memorial programme) ಟೌನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾರಿ ಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೌರಿ ಲಂಕೇಶ್‌ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಕಾಶ್‌ ರಾಜ್‌, ಸಿದ್ದರಾಮಯ್ಯ, ಮಹೇಂದ್ರ ಟಿಕಾಯಿತ್‌ ಮತ್ತಿತರರು

ʻʻನಾನು ಇಲ್ಲಿಗೆ ಬರುವ ಮೊದಲು ಖಾಸಗಿ ಚಾನಲ್ ಒಂದರ ಸಂದರ್ಶನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲಾ 30 ಜನರು ಕಾವಿ ಶಾಲು ಹಾಕಿಕೊಂಡು ಬಂದಿದ್ದರು. ಅವರನ್ನ ನೋಡಿ ನಾನು ನಿಮ್ಮ ಜೊತೆನೇ ಮಾಡಬೇಕು ಬನ್ನಿ ಅಂತ ಕರೆದೆ. ನಾನು ಟ್ವೀಟ್‌ನಲ್ಲಿ ಸನಾತನಿ ಸಂಸತ್ ಅಂತ ಹಾಕಿದ್ದೆ. ಅದನ್ನು ಅವರಲ್ಲಿ ಒಬ್ಬರ ಪ್ರಶ್ನೆ ಮಾಡಿದ. -ನೀನು ಸನಾತನ ಧರ್ಮದವನು ಅಲ್ವಾ- ಎಂದು ಕೇಳಿದ. ಆಗ ನಾನು,- ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನನ್ನ ಅಪ್ಪ- ಅಮ್ಮ ಹುಟ್ಟಿದ್ದೇನೆʼʼ ಎಂದು ಹೇಳಿದೆ ಎಂದು ಪ್ರಕಾಶ್‌ ರಾಜ್‌ ಘಟನೆಯೊಂದನ್ನು ವಿವರಿಸಿದರು.

ʻʻನಾನು ಧರ್ಮದ ವಿರುದ್ಧ ಅಲ್ಲ.. ಪ್ರಧಾನಿ ಮೋದಿಯ ವಿರುದ್ಧ. ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದರು. ಅದು ನಮ್ಮ ಸಂಸತ್. ಅಲ್ಲಿ ಹೋಮ ಹವನ ಮಾಡಬಾರದುʼʼ ಎಂದು ಅಭಿಪ್ರಾಯಪಟ್ಟರು ಪ್ರಕಾಶ್‌ ರಾಜ್‌.

ʻʻನಮ್ಮನ್ನು ಕೊಲ್ಲುತ್ತೆನೆ ಎಂಬುವವರು ಹೇಡಿಗಳು. ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿʼʼ ಎಂದು ಪ್ರಕಾಶ್‌ ರೈ ನುಡಿದರು.

ʻʻಯಾವುದನ್ನೂ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿ ಅವರು ಅದನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ನಮ್ಮ ಮೇಲೆ ಹೇರುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧ ಇದೆʼʼ ಎಂದ ಪ್ರಕಾಶ್‌ ರಾಜ್‌, ʻʻಈಗಿನ ಪರಿಸ್ಥಿತಿಯಲ್ಲಿ ನಾವು ಅಡ್ಡಗೋಡೆ ಮೇಲೆ ನಿಲ್ಲಲು ಸಾಧ್ಯವಿಲ್ಲ. ಯಾವುದಾದರೂ ಒಂದು ಕಡೆ ನಿಲ್ಲಬೇಕುʼʼ ಎಂದರು.

ದೇಹಕ್ಕೆ ಗಾಯವಾದರೆ ವಾಸಿಯಾಗುತ್ತೆ, ದೇಶಕ್ಕೆ ಗಾಯವಾದರೆ ಸಹಿಸಲಾಗದು

ʻʻನಮ್ಮ ದೇಹಕ್ಕೆ ಗಾಯವಾದರೆ ಅದು ವಾಸಿಯಾಗುತ್ತದೆ. ಆದರೆ ದೇಶಕ್ಕೆ ಗಾಯವಾದರೆ ಅದು ಸಹಿಸಲು ಸಾಧ್ಯವಿಲ್ಲ.. ಹಾಗಾಗಿ ಅದರ ವಿರುದ್ಧ ಧ್ವನಿ ಎತ್ತುತ್ತೇವೆ. ಕೊಲ್ಲುತ್ತೇನೆಂಬ ಆಯುಧ ಹಿಡಿದುಕೊಳ್ಳುವವನು ವೀರನಲ್ಲ ಹೇಡಿʼʼ ಎಂದರು ಪ್ರಕಾಶ್‌ ರಾಜ್‌.

ʻʻಇಂದು ಗೌರಿಯ ದಿನ, ನಾವು ಪ್ರಶ್ನೆಯನ್ನ ಕೇಳುತ್ತಲೇ ಇರ್ತೇವೆ. ಇವರನ್ನು ಇಳಿಸುವವರೆಗೂ ನಾವು ಕೇಳ್ತಾನೇ ಇರ್ತೇವೆ, ಹೋರಾಟ ಮಾಡ್ತಾನೆ ಇರ್ತೇವೆ, ಗೌರಿಯನ್ನ ನಾವು ಹೂತಿಲ್ಲ, ಬಿತ್ತಿದ್ದೇವೆ, ಒಬ್ಬರ ದನಿಯನ್ನು ನೀವು ಅಡಗಿಸಿದ್ರೆ, ಅಂತಹ ನೂರಾರು ಗೌರಿಯರು ಹುಟ್ಟುತ್ತಾರೆ. ಹೀಗಾಗಿ ನಮ್ಮ ದನಿಯನ್ನು ಯಾರೂ ಅಡಗಿಸಲು ಆಗೊಲ್ಲʼʼ ಎಂದು ಪ್ರಕಾಶ್‌ ರಾಜ್‌ ನುಡಿದರು.

ಗೌರಿ ಲಂಕೇಶ್‌ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರಕಾಶ್‌ ರಾಜ್‌, ಸಿದ್ದರಾಮಯ್ಯ, ಮಹೇಂದ್ರ ಟಿಕಾಯಿತ್‌ ಮತ್ತಿತರರು

ನೂರಾರು ಗೌರಿಯರು ಹುಟ್ಟಿಕೊಂಡಿದ್ದಾರೆ ಎಂದ ಕವಿತಾ ಲಂಕೇಶ್‌

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ಲಂಕೇಶ್ ಅವರು, ಗೌರಿಯನ್ನು ಕೊಲೆ ಮಾಡಿದ್ದೇ ಅವರ ವಾಯ್ಸ್ ನಿಲ್ಲಿಸಲು. ಗೌರಿ ಹೋಗಿರಬಹುದು ಆದರೆ ನೂರಾರು ಜನ ಗೌರಿಯರು ಈಗ ಹುಟ್ಟಿಕೊಂಡಿದ್ದಾರೆ ಎಂದರು.

ʻʻಗೌರಿಗೆ ಸಿದ್ದರಾಮಯ್ಯ ಅಂದರೆ ತುಂಬಾ ಇಷ್ಟ. ಸಿದ್ದರಾಮಯ್ಯ ಅವರು ತಪ್ಪೇ ಮಾಡೋದಿಲ್ಲ ಅಂತ ಗೌರಿ ಹೇಳ್ತಾ ಇದ್ಳು. ಸಿದ್ದರಾಮಯ್ಯ ಸರ್ಕಾರ ಬಂದಾಗ ಗೌರಿ ಇದ್ದಿದ್ರೆ ಬಹಳ ಖುಷಿ ಪಡ್ತಾ ಇದ್ಳುʼʼ ಎಂದರು ಕವಿತಾ ಲಂಕೇಶ್‌.

ʻʻಗೌರಿ ಸತ್ತು ಇವತ್ತಿಗೆ 6 ವರ್ಷ ಆಯ್ತು ಅನ್ನೋದೇ ಆಶ್ಚರ್ಯ. ಮೊನ್ನೆ ಮೊನ್ನೆ ಅವರ ಕೊಲೆ ನಡೆದ ಹಾಗೆ ಅನಿಸುತ್ತಿದೆʼʼ ಎಂದು ಅಕ್ಕನನ್ನು ನೆನೆದು ಭಾವುಕರಾದರು ಕವಿತಾ ಲಂಕೇಶ್.

ನಾವು ಸನಾತನ ಧರ್ಮ ಒಪ್ಪಲ್ಲ ಎಂದ ಶೈಲಜಾ ಟೀಚರ್‌

ಕೇರಳದ ಶಾಸಕಿ, ಮಾಜಿ ಸಚಿವೆ ಶೈಲಜಾ ಟೀಚರ್ ಅವರು, ಸನಾತನ ಧರ್ಮವನ್ನು ನಾವು ಒಪ್ಪುವುದಿಲ್ಲ. ಗುಂಡಿಕ್ಕುವುದು, ಸಾಯಿಸುವುದು ಸನಾತನ ಧರ್ಮವೇ..? ಸಂಘಪರಿವಾರದ ಕೋಮುವಾದ ಕೈಯಲ್ಲಿದೆ ಸನಾತನ ಧರ್ಮʼʼ ಎಂದರು.

ಗೌರಿ, ನರೇಂದ್ರ ದಾಬೋಲ್ಕರ್ ಮುಂತಾದ ಹೋರಾಟಗಾರರನ್ನು ಕೊಂದಿದ್ದು ಯಾರು ಎಂದು ಪ್ರಶ್ನಿಸಿದ ಶೈಲಜಾ ಟೀಚರ್‌, ಸನಾತನ ಧರ್ಮವನ್ನು ಭಾರತದ ಸಂವಿಧಾನ ಒಪ್ಪುವುದಿಲ್ಲ ಎಂದರು.

ಇದನ್ನೂ ಓದಿ: Prakash Raj: ಜೈಭೀಮ್‌ ಸಿನಿಮಾಗಿಲ್ಲ ರಾಷ್ಟ್ರ ಪ್ರಶಸ್ತಿ; ಮತ್ತೆ ಕೇಂದ್ರದತ್ತ ವಕ್ರದೃಷ್ಟಿ ಬೀರಿದ ಪ್ರಕಾಶ್‌ ರಾಜ್!

ಕರ್ನಾಟಕದ ಕ್ರಾಂತಿ ಬೇರೆ ಕಡೆಯೂ ಆಗಲೆಂದ ಟಿಕಾಯತ್‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ರೈತ ಆಂದೋಲನದ ನಾಯಕ ರೈತ ಮುಖಂಡ ರಾಕೇಶ್ ಟಿಕಾಯತ್ ಅವರು, ಕರ್ನಾಟಕದ ಜನರು ದೇಶಕ್ಕೆ ಬಹು ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲೂ ಇದೇ ರೀತಿಯ ಪರಿವರ್ತನೆ ಆಗಬೇಕು ಎಂದರು.

ʻʻದೆಹಲಿ ಹೋರಾಟದಲ್ಲಿ 770 ರೈತರು ಸತ್ತರು. 13 ತಿಂಗಳು ರೈತರನ್ನು ಬೀದಿಯಲ್ಲಿ ಇಡಲಾಗಿತ್ತು. ಆಗ ಯಾರ ಸರ್ಕಾರ ಅಧಿಕಾರದಲ್ಲಿ ಇತ್ತುʼʼ ಎಂದು ಟಿಕಾಯತ್‌ ಪ್ರಶ್ನಿಸಿದರು. ಬೆಂಬಲ ಬೆಲೆಗಾಗಿ ನಾವು ಮತ್ತೆ ಹೋರಾಟ ಶುರು ಮಾಡಬೇಕಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆತಲ್ವಾದ್, ರಾಜಕೀಯ ಕಾರ್ಯಕರ್ತೆ ಏಂಜೆಲಾ ರಂಗದ್, ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ, ಮುಸ್ಲಿಂ ಒಕ್ಕೂಟದ ಮುಖಂಡರಾದ ಯಾಸಿನ್ ಮಲ್ಪೆ, ಮಾಜಿ ಸಚಿವ ಆಂಜನೇಯ ಅವರು ತಮ್ಮ ವಿಚಾರ ಮಂಡಿಸಿದರು.

Exit mobile version