ಬೆಂಗಳೂರು: ಉಕ್ರೇನ್-ರಷ್ಯಾ ಸಮರ, ಗಡಿಯಲ್ಲಿ ಭಾರತದ ಜತೆಗೆ ಚೀನಾದ ಸಂಘರ್ಷ ಹಾಗೂ ಪಾಕಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ( Aero India 2023) ಅಮೆರಿಕವು ಭಾರತದ ಜತೆಗೆ ತನ್ನ ಮೈತ್ರಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ತಂಡ ಭಾಗವಹಿಸಿದ್ದು, 5ನೇ ಜನರೇಶನ್‌ನ F-35 ಯುದ್ಧ ವಿಮಾನವನ್ನೂ ಪ್ರದರ್ಶಿಸಿದೆ. ಇದು ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರ ಕೂಡ ವೃದ್ಧಿಸುತ್ತಿರುವುದನ್ನು ಬಿಂಬಿಸಿದೆ. ರಷ್ಯಾ ಕೂಡ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣಾ ಸಾಧನಗಳನ್ನು ಪೂರೈಕೆ ಮಾಡುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರ ಆಮದು ತಗ್ಗಿದೆ ಎಂದು SIPRI ವರದಿ ತಿಳಿಸಿದೆ.
ಎಸ್‌ಐಪಿಆರ್‌ಐ ವರದಿಯ ಪ್ರಕಾರ 2012-16 ಮತ್ತು 2017-21ರ ಅವಧಿಯಲ್ಲಿ ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ 47% ಇಳಿದಿತ್ತು. ಜಾಗತಿಕ ಶಸ್ತ್ರಾಸ್ತ್ರ ರಫ್ತು ಕೂಡ 24%ರಿಂದ 19%ಕ್ಕೆ ಕುಸಿದಿತ್ತು. ಇದೇ ಅವಧಿಯಲ್ಲಿ ಅಮೆರಿಕದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ರಫ್ತು 14% ಏರಿಕೆಯಾಗಿತ್ತು ಎಂದು ವರದಿ ತಿಳಿಸಿದೆ.
ಅಮೆರಿಕದಿಂದ ಬಂದಿಳಿದ ಅತ್ಯಾಧುನಿಕ ಯುದ್ಧ ವಿಮಾನಗಳು ಯಾವುವು?
ಅಮೆರಿಕ ಸೇನಾಪಡೆಯ ಅತ್ಯಾಧುನಿಕ ಯುದ್ಧ ವಿಮಾನಗಳಾದ ಮಲ್ಟಿರೋಲ್ ಎಫ್-35ಎ ಲೈಟ್ನಿಂಗ್ II ( Multirole F -35 A Lightning II) ಮತ್ತು ಎಫ್-35 ಎ ಜಾಯಿಂಟ್ ಸ್ಟ್ರೈಕ್ ಫೈಟರ್ (F-35 A Joint Strike Fighter) ಯುದ್ಧ ವಿಮಾನವು ಏರೋ ಇಂಡಿಯಾ ಶೋದಲ್ಲಿ ಭಾಗವಹಿಸಿವೆ. ಈ ಯುದ್ಧ ವಿಮಾನಗಳು ಅಮೆರಿಕದ ಫೈಟರ್ ಟೆಕ್ನಾಲಜಿಯ ಆಧುನಿಕತೆಯನ್ನು ಬಿಂಬಿಸುತ್ತವೆ. ಅಮೆರಿಕದ ಈ ಯುದ್ಧ ವಿಮಾನಗಳನ್ನು ಪ್ರದರ್ಶಿಸಲು ಏರೋ ಇಂಡಿಯಾ ಸೂಕ್ತ ವೇದಿಕೆಯಾಗಿದೆ ಎಂದು ಅಮೆರಿಕ ಸೇನಾಪಡೆಯ ಮೇಜರ್ ಜನರಲ್ ಜ್ಯೂಲಿಯಾನ್ ಸಿ ಚೀಟರ್ ತಿಳಿಸಿದ್ದಾರೆ.
ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ. ಇದು ಗೌರವಾರ್ಹ ಸಂಗತಿಯಾಗಿದೆ ಎಂದು ಅಮೆರಿಕ ದೂತಾವಾಸ ಕಚೇರಿಯ ಉಸ್ತುವಾರಿ ವಹಿಸಿರುವ ಎಲಿಜಬೆತ್ ಜಾನ್ಸ್ ಹೇಳಿದ್ದರು. ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತಿರುವ ಹೊತ್ತಿನಲ್ಲಿ ನಾವು ಅದರ ಆಯ್ಕೆಯ ಪಾಲುದಾರರಾಗಲು ಬಯಸುತ್ತೇವೆ ಎಂದು ಅವರು ತಿಳಿಸಿದರು.