ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಆಪರೇಷನ್ ಒತ್ತುವರಿ (Rajakaluve Encroachment) ಕಾರ್ಯಾಚರಣೆ ಶುಕ್ರವಾರಕ್ಕೆ ಐದು ದಿನ ಪೂರೈಸಿದೆ. ಬೆಳಗ್ಗೆ 10 ಗಂಟೆಯಿಂದ ಒತ್ತುವರಿ ತೆರವು ಕಾರ್ಯ ನಡೆಯಿತು. ಆದರೆ ಬಡವರ ಆಸ್ತಿ ಒತ್ತುವರಿ ತೆರವು ಮಾಡುತ್ತಿರುವ ಬಿಬಿಎಂಪಿ, ಉಳ್ಳವರ ಆಸ್ತಪಾಸ್ತಿ ಒತ್ತುವರಿ ಮಾಡುವಲ್ಲಿ ಹಿಂದೇಟು ಹಾಕುವ ಮೂಲಕ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ 5 ದಿನಗಳಿಂದ ಪ್ರಭಾವಿಗಳಿಂದ ಆಗಿರುವ ಭೂ ಒತ್ತುವರಿ ತೆರವು ಮಾಡಲು ಪಾಲಿಕೆ ಧೈರ್ಯ ತೋರಿಸುತ್ತಿಲ್ಲ ಎನ್ನಲಾಗಿದೆ. ಒತ್ತುವರಿ ತೆರವಿನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದು, ಪ್ರಭಾವಿಗಳ ಕಟ್ಟಡ ಒಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಭಯವೇ? ಒತ್ತುವರಿ ರಿಪೋರ್ಟ್ ಪಾಲಿಕೆ ಕೈಯಲ್ಲಿದ್ದರೂ ಯಾಕೆ ತೆರವಿಗೆ ಮುಂದಾಗಿಲ್ಲ? ಬಿಬಿಎಂಪಿ ಅಧಿಕಾರಿಗಳ ಮೇಲೆ ಪ್ರಭಾವಿ ವ್ಯಕ್ತಿಗಳು ಒತ್ತಡ ಹಾಕ್ತಿದ್ದಾರಾ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಪಾಲಿಕೆ ಅಧಿಕಾರಿಗಳಿಂದ ಒತ್ತುವರಿ ತೆರವು ಕಳ್ಳಾಟ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ಇದನ್ನೂ ಓದಿ | Command Center | ಬಿಬಿಎಂಪಿಯ ಬಹು ನಿರೀಕ್ಷಿತ ಐಸಿಸಿಸಿ ಸೇವೆ ಅಕ್ಟೋಬರ್ 1ಕ್ಕೆ ಆರಂಭ!
ಒತ್ತುವರಿ ಕಾರ್ಯಾಚಣೆ ಆರಂಭವಾದಾಗಿನಿಂದ ದೊಡ್ಡವರ ಬಿಲ್ಡಿಂಗ್ ಮುಂದೆ ಬುಲ್ಡೋಜರ್ ಆರ್ಭಟಿಸುತ್ತಿಲ್ಲ. ಮಹದೇವಪುರ, ಯಲಹಂಕ ಸೇರಿ ಹಲವು ಕಡೆ ಒತ್ತುವರಿ ತೆರವು ಕಾರ್ಯ ವೇಗ ಪಡೆದಿಲ್ಲ. ದುಡ್ಡಿದ್ದವರ ಮನೆ ಮುಟ್ಟಲು, ಐಟಿ ಬಿಟಿ ಕಂಪನಿಗಳ ಒತ್ತುವರಿ ಜಾಗದತ್ತ ಬಿಬಿಎಂಪಿ ಅಧಿಕಾರಿಗಳು ಸುಳಿಯುತ್ತಿಲ್ಲ. ಬಾಗ್ಮನೆ, ವಿಪ್ರೋ, ಎಪ್ಸಿಲಾನ್ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳು ಇರುವ ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ನೆರೆ ಪೀಡಿತ ಪ್ರದೇಶದಲ್ಲಿ ಒತ್ತುವರಿ ಆದದ್ದೇಷ್ಟು?
ಮಹದೇವಪುರ ವಲಯದಲ್ಲಿ 180 ಸ್ವತ್ತುಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ. ಆದರೆ, ಅಕ್ರಮವಾಗಿ ನಿರ್ಮಿಸಿಕೊಂಡ ಕಟ್ಟಡಗಳನ್ನು ತೆರವು ಮಾಡಲು ಕೋಟ್ಯಂತರ ರೂಪಾಯಿ ಬೇಕಾಗಿದೆ. ಮಹದೇವಪುರದಲ್ಲಿ ಪ್ರತಿ ಕಿ.ಮೀ ಕಾಲುವೆ ನಿರ್ಮಾಣಕ್ಕೆ 12-17 ಕೋಟಿ ರೂಪಾಯಿ ಖರ್ಚು ಆಗುತ್ತದೆ. ಇಲ್ಲಿ ಹೊಸದಾಗಿ ಬರೋಬ್ಬರಿ 72 ಕಿ.ಮೀ ಕಾಲುವೆ ನಿರ್ಮಾಣ ಆಗಬೇಕಿದ್ದು, ಮಹದೇವಪುರ ವಲಯಕ್ಕೆ ಕಾಲುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 150 ಕೋಟಿ ರೂ. ಬಿಡುಗಡೆ ಮಾಡಿದೆ. ಸರ್ಕಾರ ನೀಡಿರುವ 150 ಕೋಟಿಗೆ ಕೇವಲ 20 ಕಿ.ಮೀ ಮಾತ್ರ ಹೊಸದಾಗಿ ಕಾಲುವೆ ನಿರ್ಮಿಸಬಹುದು ಎನ್ನಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಈವರೆಗೆ ಚಿನ್ನಪ್ಪನಹಳ್ಳಿ, ಮುನೇಕೊಳಲು, ಶಾಂತಿನಿಕೇತನ ಲೇಔಟ್, ದೊಡ್ಡನೆಕ್ಕುಂದಿ, ಚಲ್ಲಘಟ್ಟ, ಯಮಲೂರು ಪ್ರದೇಶದಲ್ಲಿ ಕೇವಲ ಶೇ.30-40 ರಷ್ಟು ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಮಹದೇವಪುರದಲ್ಲಿ 4 ಕಿ.ಮೀ ಒತ್ತುವರಿ ತೆರವು ಕಾರ್ಯವಾಗಿದೆ. ಇನ್ನೂ ಸಾಕಷ್ಟು ತೆರವು ಕಾರ್ಯಚಾರಣೆ ಮಾಡಬೇಕಿದೆ ಎಂದು ಬಿಬಿಎಂಪಿ ಮತ್ತು ಎಸ್‌ಡಬ್ಲ್ಯುಎಂ ಮುಖ್ಯ ಅಭಿಯಂತರ ಬಸವರಾಜ್ ಆರ್ ಕಬಾಡೆ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ರಾಜಕಾಲುವೆ ಒತ್ತುವರಿ ಸರ್ವೆ
ಬಿಬಿಎಂಪಿ ಸಹಾಯಕ ಅಭಿಯಂತರರಾದ ಮಾಲತಿ ನೇತೃತ್ವದಲ್ಲಿ ಮಹದೇವಪುರ ಭಾಗದಲ್ಲಿ ಸರ್ವೇ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಶೀಲವಂತೆ ಕೆರೆಯಿಂದ ವರ್ತೂರು ಕೆರೆಯವರೆಗೆ, ಕಸವನಹಳ್ಳಿ ಕೆರೆಯಿಂದ ಕೈಗೊಂಡನ ಹಳ್ಳಿ ಸೌವ್ಲು ಕೆರೆ, ಸದಾರಮಂಗಲ ಕೆರೆಯಿಂದ ಸೀತರಾಮ್ ಪಾಳ್ಯ ಕೆರೆ ಹಾಗೂ ವರ್ತೂರು ಕೆರೆವರೆಗೂ ಸರ್ವೇ ನಡೆಯಲಿದೆ. ಯಮಲೂರಿನಿಂದ ವರ್ತೂರು ಕೆರೆ ಭಾಗದವರೆಗೂ, ದೊಡ್ಡಕನ್ನಹಳ್ಳಿ ಕೆರೆಯಿಂದ ಸೌವ್ಲು ಕೆರೆಯವರೆಗೆ, ಬೆಳ್ಳಂದೂರು ವಿಲೇಜ್ ಭಾಗದಲ್ಲಿ ಸರ್ವೇ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ | ರಾಜಕಾಲುವೆ ಹೆಸರನ್ನು ಬದಲಾಯಿಸಿ: ಸದನದಲ್ಲಿ ಹೊಸ ಹೆಸರು ಸೂಚಿಸಿದ ಎ.ಟಿ. ರಾಮಸ್ವಾಮಿ