ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Blast in bengaluru) ಸಂಭವಿಸಿ ಆತಂಕದ ಅಲೆಗಳನ್ನು ಸೃಷ್ಟಿಸಿದೆ. ಈ ನಡುವೆ, ದುಷ್ಕರ್ಮಿಗಳು ರಾಜ್ಯ ಸರ್ಕಾರಕ್ಕೇ ಬಾಂಬಿಡುವ ಎಚ್ಚರಿಕೆ (Bomb Threat) ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್ ಬಾಂಬ್ ಬೆದರಿಕೆ ಹಾಕಲಾಗಿತ್ತು. ಜತೆಗೆ ಅಂಬಾರಿ, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಈಗ ಇದಕ್ಕೆ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯು ಜನರಿಗೆ ಅಭಯ ಸಂದೇಶವನ್ನು ನೀಡಿದ್ದು, ಪ್ರಯಾಣಿಕರು ಈ ಬಗ್ಗೆ ಭಯಗೊಳ್ಳುವುದು ಬೇಡ. ನಮ್ಮ ಸಂಸ್ಥೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಸ್ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಕೆಎಸ್‌ಆರ್‌ಟಿಸಿ ಜಾಗ್ರತೆ ವಹಿಸಿದೆ. ಈಗಾಗಲೇ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಪೊಲೀಸ್ ಇಲಾಖೆಯ ಸೂಚನೆಗಳ ಪ್ರಕಾರ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಈ ಬಗ್ಗೆ ಯಾವುದೇ ಭಯ ಬೇಡ. ಹೇಗೆ ಈ ಮೊದಲು ಎಲ್ಲರೂ ಪ್ರಯಾಣವನ್ನು ಮಾಡುತ್ತಿದ್ದಿರೋ ಅದೇ ರೀತಿಯಾಗಿ ಇನ್ನು ಮುಂದೆಯೂ ಸಹ ಪ್ರಯಾಣ ಬೆಳೆಸಿ. ವೇಳಾಪಟ್ಟಿಯಲ್ಲಿ ಸಹ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಯಾವುದೇ ಮಾರ್ಗಗಳನ್ನೂ ರದ್ದುಪಡಿಸಿಲ್ಲ. ನಮ್ಮ ಸೇವೆ ನಿರಂತರವಾಗಿ ಅದೇ ರೀತಿಯಾಗಿ ಇರಲಿದೆ. ಈಗ ಮಹಾಶಿವರಾತ್ರಿ ಇರುವುದರಿಂದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ಹೆಚ್ಚುವರಿ ಬಸ್‌ಗಳನ್ನು ಬಿಡಲು ಸಿದ್ಧರಾಗಿದ್ದೇವೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ಪೊಲೀಸರಿಂದ ನಿರಂತರ ಸಂಪರ್ಕ
ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪಶ್ಚಿಮ ವಲಯ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಚಾಲಕರು, ನಿರ್ವಾಹಕರು ಮತ್ತು ಇತರ ಸಿಬ್ಬಂದಿಗೆ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ಪೊಲೀಸರಿಗೆ ತಿಳಿಸಲು ಸೂಚನೆಯನ್ನು ಕೊಟ್ಟಿದ್ದೇವೆ ಎಂದು ಗಿರೀಶ್ ಹೇಳಿದ್ದಾರೆ.
ಏನಿದು ಬಾಂಬ್ ಬೆದರಿಕೆ?
ಮಾ. 5ರಂದು ದುಷ್ಕರ್ಮಿಗಳು ಇ-ಮೇಲ್ ಮೂಲಕ ರಾಜ್ಯ ಸರ್ಕಾರಕ್ಕೇ ಬಾಂಬಿಡುವ ಎಚ್ಚರಿಕೆಯನ್ನು (Bomb Threat) ನೀಡಿದ್ದರು. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್ ಬಾಂಬ್ ಬೆದರಿಕೆ ಹಾಕಲಾಗಿದೆ. 25 ಲಕ್ಷ ಡಾಲರ್ (20 ಕೋಟಿ ರೂ.) ನೀಡದೇ ಹೋದರೆ ಅನಾಹುತ ಖಚಿತ ಎಂದೂ ದುಷ್ಕರ್ಮಿ ಇಮೇಲ್‌ನಲ್ಲಿ ಬೆದರಿಕೆಯನ್ನು ಹಾಕಲಾಗಿತ್ತು.
ಶಾಹಿದ್ ಖಾನ್ ಎಂಬ ಹೆಸರಿನ ವ್ಯಕ್ತಿ ಕಳುಹಿಸಿದ್ದಾನೆ ಎಂದು ಹೇಳಲಾದ ಬೆದರಿಕೆ ಇ-ಮೇಲ್‌ನಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ ಎಂದು ಎಚ್ಚರಿಕೆ ನೀಡಲಾಗಿತ್ತು. ಶನಿವಾರ 2.48ಕ್ಕೆ ನಗರದ ಹಲವು ಕಡೆ ಬಾಂಬ್‌ಗಳು ಸ್ಫೋಟಿಸಲಿವೆ ಎಂದು ಇ-ಮೇಲ್ ಸಂದೇಶದಲ್ಲಿ ತಿಳಿಸಲಾಗಿತ್ತು. ಸಿಎಂ, ಡಿಸಿಎಂ, ಸಚಿವರು ಮಾತ್ರವಲ್ಲ, ಬಸ್, ರೈಲು, ದೇವಾಲಯಗಳು, ಹೋಟೆಲ್‌ಗಳು ಹಾಗೂ ಉತ್ಸವಗಳಲ್ಲಿ ಕೂಡಾ ಬಾಂಬ್ ಸ್ಫೋಟ ಸಂಘಟಿಸಲಾಗುವುದು ಎಂದು ಇ- ಮೇಲ್‌ನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಾಳೆ ಫೈನಲ್; ಇಲ್ಲಿದೆ 28 ಕ್ಷೇತ್ರಗಳ ಫುಲ್ ಲಿಸ್ಟ್!
ಅಂಬಾರಿ, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಸ್ಫೋಟಿಸುವ ಬೆದರಿಕೆ
ಇದೇ ಇ- ಮೇಲ್‌ನಲ್ಲಿ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿರುವ ಅಂಬಾರಿ, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಸಹ ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಯಾಣಿಕರು ಭಯಗೊಂಡಿದ್ದರು. ಈಗ ಕೆಎಸ್‌ಆರ್‌ಟಿಸಿ ಈ ಬಗ್ಗೆ ಅಭಯ ನೀಡಿದ್ದು, ಎಲ್ಲ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದೆ.