ಬೆಂಗಳೂರು: ಜೆಡಿಎಸ್ ಸೇರಿ ಸಮಾಜವಾದಿ ಹಿನ್ನೆಲೆ ಹೊಂದಿದ್ದ ಪಕ್ಷಗಳು ಜಾತಿವಾದಿ, ಕುಟುಂಬವಾದಿಗಳಾಗಿವೆ ಎಂದ ಕೇಂದ್ರ ಗೃಹಸಚಿವ ಅಮಿತ್ ಶಾ, ಕುಟುಂಬದವರೆಲ್ಲರೂ ರಾಜಕಾರಣದಲ್ಲಿದ್ದರೆ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಗೇಲಿ ಮಾಡಿದರು.
ಸಂವಾದ ಫೌಂಡೇಷನ್ ವತಿಯಿಂದ ಟೌನ್‌ಹಾಲ್‌ನಲ್ಲಿ ಆಯೋಜನೆ ಮಾಡಲಾಗಿದ್ದ “ಭಾರತೀಯ ರಾಜಕೀಯ ವ್ಯವಸ್ಥೆ: 65 ವರ್ಷಗಳ ದೇಶದ ರಾಜಕೀಯ ಸ್ಥಿತಿಗತಿ ಹಾಗೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಆದ ಸ್ಥಿತ್ಯಂತರ” ಕುರಿತು ಸಂವಾದದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಲಭಿಸಿದಾಗ, ಯಾವ ರೀತಿ ದೇಶ ನಡೆಯಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯಾರಿಗೂ ಗೊಂದಲ ಇರಲಿಲ್ಲ. ಆದರೆ ಎರಡು ಪಕ್ಷ, ಬಹು ಪಕ್ಷ ಅಥವಾ ಇನ್ನಾವುದೇ ರೀತಿಯ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ, ಬಹು ಪಕ್ಷದ ಸಂಸತ್ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲಾಯಿತು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಭಾರತವನ್ನು ಕರೆಯಲಾಗುತ್ತದೆ. ಆದರೆ ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ. ಶ್ರೀಕೃಷ್ಣನಿಂದ ಭಗವಾನ್ ಬಸವೇಶ್ವರರವರೆಗೆ ಲೋಕತಂತ್ರ ಇಲ್ಲಿ ಜಾರಿಯಲ್ಲಿತ್ತು.
ನಮ್ಮ ವ್ಯವಸ್ಥೆಯಲ್ಲಿ ಪಕ್ಷಗಳ ಪಾತ್ರ ಮಹತ್ವದ್ದು. ಕಾಂಗ್ರೆಸ್, ಜನಸಂಘ, ಸಮಾಜವಾದಿ ಹಾಗೂ ಕಮ್ಯುನಿಸ್ಟ್ ಎಂಬಂತೆ ದೇಶದ ಜನರ ಎದುರು ನಾಲ್ಕು ಆಯ್ಕೆಗಳಿದ್ದವು.
ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿದೆ. ಸಂಪೂರ್ಣ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ. ಸಮಾಜವಾದಿ ಪಕ್ಷಗಳು ನಿಧಾನವಾಗಿ ಜಾತಿವಾದಿಯಾಗಿ, ಪರಿವಾರವಾದಿ ಪಕ್ಷಗಳಾದವು. ಜೆಡಿಎಸ್‌ನಲ್ಲಿ ಚುನಾವಣೆ ಎದುರಿಸದವರೇ ಇಲ್ಲ. ಇವರ ಮನೆಯನ್ನು ಯಾರು ನಡೆಸುತ್ತಾರೆ ಎಂದು ನನಗೆ ಆಶ್ಚರ್ಯ ಆಗುತ್ತದೆ.
ಇನ್ನು ಕಾಂಗ್ರೆಸ್ ಬಗ್ಗೆ ಮಾತನಾಡುವುದಾದರೆ ಸ್ವಾತಂತ್ರ್ಯ ಹೋರಾಟಕ್ಕೆ ಅದರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಆದರೆ ಅದೊಂದು ಸ್ಪೆಷಲ್ ಪರ್ಪಸ್ ವೆಹಿಕಲ್ ರೀತಿ ಮಾತ್ರ ಆಗಿತ್ತು. ಅದೇ ರೀತಿ ಕಮ್ಯುನಿಸ್ಟ್ ಪಕ್ಷವೂ ನಿಧಾನವಾಗಿ ತೆರೆಮರೆಗೆ ಸರಿಯಿತು. ಜನಸಂಘವು ಅನೇಕ ಸಂಘರ್ಷಗಳ ನಂತರ ಈ ಹಂತದಲ್ಲಿದೆ. ಇಲ್ಲಿ ಅಧ್ಯಕ್ಷನ ಮಗ ಮತ್ತೆ ಅಧ್ಯಕ್ಷನಾಗುವುದಿಲ್ಲ. ಸಾಮಾನ್ಯ ಕಾರ್ಯಕರ್ತ ಇಲ್ಲಿ ನೇತೃತ್ವ ವಹಿಸುತ್ತಾನೆ.
ಸಾಂಸ್ಕೃತಿಕ ರಾಷ್ಟ್ರವಾದವೇ ಬಿಜೆಪಿಯ ಸಿದ್ಧಾಂತ. ಕರ್ನಾಟಕದ ನಾಡಗೀತೆಗೂ, ಗುಜರಾತ್ ಗೀತೆಗೂ ರಾಜ್ಯದ ಹೆಸರು ಬಿಟ್ಟರೆ ಭಾವನೆ ಸಮಾನ. ಈ ದೇಶದ ವ್ಯಾಪ್ತಿಯನ್ನು ರಾಜಕೀಯ ಗಡಿಗಳಲ್ಲ, ಸಾಂಸ್ಕೃತಿಕ ಮೌಲ್ಯಗಳು ನಿರ್ಧರಿಸುತ್ತವೆ. ಏಕಾತ್ಮ ಮಾನವತಾವಾದ ಹಾಗೂ ಅಭಿವೃದ್ಧಿಯ ಮೊದಲ ಫಲವು ವಂಚಿತರಿಗೆ ಮೊದಲು ಸಿಗಬೇಕು ಎನ್ನುವುದು ಬಿಜೆಪಿಯ ಸೈದ್ಧಾಂತಿಕ ನೆಲೆ. ಇದಕ್ಕಾಗಿ ಬಿಜೆಪಿ ಸ್ಥಾಪನೆ ಆಯಿತು ಎಂದರು.