Site icon Vistara News

Basavanna cultural leader : ಅಣ್ಣ ಬಸವಣ್ಣ ಇನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ

Anna Basavanna cultural leader Karnataka

ಬೆಂಗಳೂರು: ಅಣ್ಣ ಬಸವಣ್ಣ ಎಂದೇ ಎಲ್ಲರ ಬಾಯಲ್ಲಿ ನಲಿದಾಡುವ ಜಗಜ್ಯೋತಿ ಬಸವೇಶ್ವರ (Jagajyothi Basaveshwara) ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ (Cultural leader of Karnataka) ಎಂದು ಘೋಷಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯು (Cabinet Meeting) ತೀರ್ಮಾನಿಸಿದೆ. ಜಗಜ್ಯೋತಿ ಬಸವೇಶ್ವರರ ಚಿಂತನೆ ಅನುಭಾವ (Thoughts of Basaveshwara) ಸಾರ್ವಕಾಲಿಕವಾಗಿದ್ದು, ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ (Karnataka Government) ಅಧಿಕೃತವಾಗಿ ಸದ್ಯವೇ ಘೋಷಿಸಲಿದೆ.

ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅಣ್ಣ ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸಭೆಯು ತೀರ್ಮಾನಿಸಿದೆ. ಸಂಪುಟದಲ್ಲಿ ಯಾವುದೇ ಚರ್ಚೆಯಾಗದೇ ಎಲ್ಲರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಹಲವು ಸ್ವಾಮೀಜಿಗಳು, ಚಿಂತಕರ ಮನವಿಗೆ ಸ್ಪಂದಿಸಿದ ಸರ್ಕಾರ

ಜನವರಿ 8ರಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಜಗದ್ಗುರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು ಮತ್ತು ದಲಿತ, ರೈತ, ಕಾರ್ಮಿಕ, ಮಹಿಳಾ ಚಳವಳಿಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದರು.

ಈ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಈ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.

ಅದರಂತೆಯೇ ಈಗ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಕಳೆದ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಈ ಸಂಬಂಧ ಒತ್ತಾಯಿಸುವ ನಿರ್ಣಯ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅನುಭವ ಮಂಟಪ ಸ್ಥಾಪಿಸಿದ ಜಂಗಮ ಚಳವಳಿಯ ನೇತಾರ

ಬಸವಣ್ಣನವರು ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಎಲ್ಲವೂ ಆಗಿದ್ದರು. ಹುಟ್ಟಿ ಬೆಳೆದು ಸಾಧಿಸಿದ್ದೆಲ್ಲ 12ನೇ ಶತಮಾನದಲ್ಲಿ. ಆದರೆ ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ನೀಡಿದ ಮಾರ್ಗದರ್ಶನ ಇಂದಿಗೂ ಅನುಸರಣೀಯ. ಕಲಚೂರ್ಯರ ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ಅವರು ಕಲಿಯೂ ಹೌದು, ಕವಿಯೂ ಹೌದು. ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಅವರು ಜಂಗಮ ಚಳವಳಿಯ ನೇತಾರರಾದರು. ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ, ಚನ್ನಬಸವಣ್ಣ ಮುಂತಾದವರು ಬಸವಣ್ಣನವರಿಗೆ ಈ ಕಾಯಕದಲ್ಲಿ ಸಾಂಗತ್ಯ ನೀಡಿದ್ದರು.

ಕಾಯಕವೇ ಕೈಲಾಸವೆಂದ ಕಾಯಕ ಯೋಗಿ

ಜಾತಿ ತಾರತಮ್ಯ, ಢಾಂಬಿಕ ಭಕ್ತಿ ಎಲ್ಲದರ ವಿರುದ್ಧ ತಿರುಗಿ ಬಿದ್ದಿದ್ದ ಬಸವಣ್ಣ, ತಮ್ಮದೇ ಆದ ರೀತಿಯಲ್ಲಿ ದಮನಕ್ಕೊಳಗಾದವರ ಧ್ವನಿಯಾಗಿ ನಿಂತಿದ್ದರು. ಇಷ್ಟಲಿಂಗ ಮೂರ್ತಿಯ ಪರಿಕಲ್ಪನೆಯನ್ನು ನೀಡಿ ದೇವರನ್ನು ಎಲ್ಲರ ಕರಸ್ಥಲಕ್ಕೆ ತಂದರು. ಕಾಯಕವೇ ಕೈಲಾಸ ಎಂದು ಹೇಳಿ, ಎಲ್ಲರಲ್ಲೂ ದುಡಿಯುವ ಛಲ ಹುಟ್ಟು ಹಾಕಿದರು. ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲರೂ ವಿಚಾರ ವಿನಿಮಯ ಮಾಡಲು ವೇದಿಕೆ ಕಲ್ಪಿಸಿದರು. ಕೆಳ ಜಾತಿಗಳಿಂದಲೂ ಬಂದ ಶರಣರು ಇಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿ ಮನುಕುಲಕ್ಕೆ ಆದರ್ಶರೆನಿಸಿದರು.

1105ರಲ್ಲಿ ಜನಿಸಿದ ಬಸವೇಶ್ವರರು ಧರ್ಮ, ಸಮಾಜ, ತತ್ವಜ್ಞಾನ, ಸಾಹಿತ್ಯ, ರಾಜಕೀಯದಲ್ಲಿ ಕೈಗೊಂಡ ಎಲ್ಲ ಕಾರ್ಯಗಳೂ ಕ್ರಾಂತಿಕಾರಿ. ಲಿಂಗಾಯತ ಧರ್ಮದ ಮೂಲಪುರುಷರಾದ ಬಸವೇಶ್ವರರು ಕರ್ನಾಟಕದ ಬಸವಕಲ್ಯಾಣ ಮತ್ತು ಶ್ರವಣಬೆಳಗೊಳದಲ್ಲಿ ಅದನ್ನು ಪಸರಿಸಿದರು. ಬಸವಣ್ಣರ ಅನುಭವ ಮಂಟಪ ಪರಿಕಲ್ಪನೆ ಜಗತ್ತಿನ ಮೊದಲ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: Free Electricity : ಗೃಹ ಜ್ಯೋತಿ ನಿಯಮ ಬದಲು ; 10% ಬದಲು 10 ಯುನಿಟ್‌ ಹೆಚ್ಚುವರಿ; ಲಾಭಾನಾ? ನಷ್ಟಾನಾ?

ಕಾನೂನಿನಲ್ಲಿ ಅವಕಾಶವಿದೆ : ಮಹಾರಾಷ್ಟ್ರದಲ್ಲಿ ಶಿವಾಜಿ ಸಾಂಸ್ಕೃತಿಕ ನಾಯಕ

ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣರನ್ನು ಘೋಷಿಸಲು ಕಾನೂನಿನಲ್ಲಿ ಅವಕಾಶವಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಛತ್ರಪತಿ ಶಿವಾಜಿ ಮಹಾರಾಜರನ್ನು ʻಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದೆ. ಇದೇ ರೀತಿಯಾಗಿ ಕರ್ನಾಟಕ ಸರ್ಕಾರ ಕೂಡ ಈಗ ಜಗಜ್ಯೋತಿ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ತೀರ್ಮಾನಿಸಿದೆ.

Exit mobile version