Site icon Vistara News

ಅವೈಜ್ಞಾನಿಕ ಹಂಪ್ಸ್‌ | ಬೆಂಗಳೂರು ವಿವಿ ಆವರಣದಲ್ಲಿ ಮತ್ತೊಂದು ಅಪಘಾತ; ಯುವಕನಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಬಸ್‌ನಡಿ ಸಿಲುಕಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಬೆನ್ನಲ್ಲೇ ಮತ್ತೊಂದು ಅಪಘಾತ ನಡೆದಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು ಅಪಘಾತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಹಮ್ಮದ್ ಪಾಜೀಲ್ ಗಾಯಗೊಂಡ ಯುವಕ. ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಶಿಲ್ಪಾ ಎಂಬುವವರು ಸೋಮವಾರ ಬಸ್‌ ಹತ್ತುವಾಗ ಜಾರಿಬಿದ್ದಾಗ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬಳಿಕ ರಾತ್ರೋ ರಾತ್ರಿ ವಿಶ್ವವಿದ್ಯಾಲಯ ಆವರಣದಲ್ಲಿ ವಿವಿಧೆಡೆ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿತ್ತು.

ಇದಾದ ಬಳಿಕ ಯುವಕನೊಬ್ಬ ಸೋಮವಾರವೇ ಹಂಪ್ ಬಳಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದ. ಇದೀಗ ಮಂಗಳವಾರ ಮತ್ತೊಬ್ಬ ಯುವಕ ಹಂಪ್‌ ಬಳಿ ನಿಯಂತ್ರಣ ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿವಿ ಆವರಣದಲ್ಲಿ ಸೋಮವಾರವಷ್ಟೇ ಬಿಎಂಟಿಸಿಯಿಂದ ದುರ್ಘಟನೆ ನಡೆದಿತ್ತು. ಬಳಿಕ ರಾತ್ರೋರಾತ್ರಿ ಅವೈಜ್ಞಾನಿಕ ಹಂಪ್ಸ್ ನಿರ್ಮಾಣ ಮಾಡಿರುವುದರಿಂದ ಮತ್ತೊಂದು ಅಪಘಾತವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ | ಬಿಎಂಟಿಸಿ ಬಸ್‌ ಚಕ್ರದಡಿ ಸಿಲುಕಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ ಸ್ಥಿತಿ ಗಂಭೀರ

Exit mobile version