Site icon Vistara News

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತ ಜಾರಿ

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಯಾಗಿದೆ. ಕಳೆದ ವಾರ ಸಂಪುಟದಲ್ಲಿ
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಇದೀಗ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಕಾಯ್ದೆಯನ್ನು ಮಂಡಿಸಿರಲಿಲ್ಲ. ಅಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಕಡಿಮೆ ಇತ್ತು. ಸುಗ್ರೀವಾಜ್ಞೆ ಹೊರಡಿಸಿ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆಯುವ ತೀರ್ಮಾನ ಮಾಡಲಾಗಿತ್ತು. ಇದೀಗ ರಾಜ್ಯಪಾಲರ ಅಂಕಿತ ಹಾಕಿದ್ದು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಿದೆ. 

ಸಾಮಾನ್ಯವಾಗಿ ಮತಾಂತರ ನಿಷೇಧ ಕಾಯ್ದೆ ಎಂದು ಹೇಳಲಾಗುತ್ತದಾದರೂ ಕಾಯ್ದೆಯ ಪೂರ್ಣ ಹೆಸರು ʼಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶ 2022ʼ. ಕಾಯ್ದೆಯ ಪ್ರಕಾರ, ಬಲವಂತದ ಮತಾಂತರ ಮಾಡುವಂತಿಲ್ಲ. ಅದು ಜಾಮೀನು ರಹಿತ ಅಪರಾಧ ಮತ್ತು ನಡೆಸಲಾದ ಮತಾಂತರ ಅಸಿಂಧು ಆಗುತ್ತದೆ.

ಇದನ್ನೂ ಓದಿ | ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ನಿರ್ಧಾರ

ಹಣ, ಉಡುಗೊರೆ, ಶಿಕ್ಷಣ ಮತ್ತಿತರ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಭಾವನಾತ್ಮಕವಾಗಿ ತಮ್ಮತ್ತ ಸೆಳೆದುಕೊಂಡು ಮತಾಂತರ ಮಾಡುವಂತಿಲ್ಲ. ಆಮಿಷ ಒಡ್ಡಿ ಮಾಡಲಾದ ಮದುವೆಯೂ ಅಸಿಂಧುವಾಗುತ್ತದೆ ಎನ್ನುವುದು ಸೇರಿ ಅನೇಕ ಅಂಶಗಳಿವೆ.

ಯಾವುದೇ ಸುಗ್ರೀವಾಜ್ಞೆ ಹೊರಡಿಸಿದ ನಂತರ ರಾಜ್ಯಪಾಲರ ಸಮ್ಮತಿಗೆ ಕಳಿಸಬೇಕು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಒಪ್ಪಿಗೆ ನೀಡಿದ ಬಳಿಕ ಕಾಯ್ದೆ ಜಾರಿಗೆ ಬರಲಿದೆ. ಯಾವುದೇ ಸುಗ್ರೀವಾಜ್ಞೆ ಹೊರಡಿಸಿದ ನಂತರ ಆರು ತಿಂಗಳೊಳಗೆ ವಿಧಾನಮಂಡಲದ ಅನುಮೋದನೆ ಪಡೆಯಬೇಕು. ಇಲ್ಲದಿದ್ದರೆ ಸುಗ್ರೀವಾಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ.

ಕಾಯ್ದೆಯಲ್ಲಿ ಏನಿದೆ?

  1. ಬಲವಂತದ ಮತಾಂತರ ಮಾಡುವುದು , ವಂಚನೆ, ಒತ್ತಾಯ ಆಮಿಷದ ಮದುವೆಗೆ ನಿಷೇಧಿಸಲಾಗಿದೆ.
  2. ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.
  3. ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅನೂರ್ಜಿತ
  4. ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿಗಳು ಹಾಗೂ ಎನ್‍ಜಿಓಗಳು ಪಾಲ್ಗೊಳ್ಳುವಂತಿಲ್ಲ.
  5. ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದ ಅನುದಾನ ಸ್ಥಗಿತಗೊಳಿಸಲಾಗುತ್ತದೆ.
  6. ಒಂದು ವೇಳೆ ಧರ್ಮ ಬದಲಿಸುವಾಗ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.
  7. ಮತಾಂತರಗೊಂಡ ಎಸ್‍ಸಿ, ಎಸ್‍ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ,ಇತರೆ ಸೌಲಭ್ಯಗಳು ರದ್ದಾಗುತ್ತದೆ.
ದಂಡ ಮತ್ತು ಶಿಕ್ಷೆಗಳು :
  1. ಎಸ್‍ಸಿ,ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ
  2. ಮಹಿಳೆಯರು, ಅಪ್ರಾಪ್ತರು, ಬುದ್ದಿಮಾಂಧ್ಯರಿಗೆ ಆಸೆ ತೋರಿಸಿ, ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.
  3. ಕಾಯ್ದೆಗಳನ್ನು ಉಲ್ಲಂಘಿಸಿದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ನೀಡಲಾಗುತ್ತದೆ.
  4. ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3 ರಿಂದ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ನೀಡಲಾಗುತ್ತದೆ.
  5. ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
  6. ಬಲವಂತದ ಮತಾಂತರ ಸಾಬೀತಾದಲ್ಲಿ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ಪರಿಹಾರ
  7. ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಲಾಗುತ್ತದೆ.
  8. ಈ ಹಿಂದೆಯೂ ಮತಾಂತರ ಮಾಡಿದ್ದು ಸಾಬೀತಾದಲ್ಲಿ ಅದಕ್ಕೂ ಹೆಚ್ಚು ವಿಧಿಸಲಾಗುವುದು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಹಿಂದುತ್ವ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುತ್ತಿರುವ ರಾಜ್ಯ ಸರಕಾರ, ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧಾರ ಮಾಡಿತ್ತು.
ಈ ಹಿಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಸಂಖ್ಯಾಬಲ ಕಡಿಮೆ ಇದ್ದದ್ದರಿಂದ ಅಂಗೀಕಾರ ಪಡೆಯಲು ಸರ್ಕಾರದಿಂದ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಮುಂದಿನ ಅಧಿವೇಶನದವರೆಗೆ ಕಾಯುವುದಕ್ಕಿಂತಲೂ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ನಿರ್ಧಾರ ಮಾಡಿತ್ತು

ಇದನ್ನೂ ಓದಿ | ದ್ವೀಪರಾಷ್ಟ್ರದಲ್ಲಿ ಆರ್ಥಿಕ ಅನಿಶ್ಚಿತತೆ: ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ರಾಜಪಕ್ಸ

Exit mobile version