ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಆಸ್ತಿ ತೆರಿಗೆ ವಸೂಲಿ ಮಾಡುವುದೇ ದೊಡ್ಡ ಸವಾಲು. ಕೋಟಿ ಕೋಟಿ ಆಸ್ತಿ ತೆರಿಗೆ ವಂಚನೆಯಿಂದಾಗಿ ಆದಾಯ ಸೋರಿಕೆಯನ್ನು ತಡೆಯಲು ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಕಳೆದ ವರ್ಷ 1170 ಕೋಟಿ ರೂ.ಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಜೂನ್ ೧೬ರವರೆಗೆ 2093 ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಇದರಲ್ಲಿ ಶೇ.30 ರಷ್ಟು ವ್ಯತ್ಯಾಸ ಇರುವುದು ಕಂಡು ಬಂದಿದೆ.
ಇದನ್ನೂ ಓದಿ | ಪಾಲಿಕೆ ಆಸ್ತಿ ರಕ್ಷಣೆಗಾಗಿ ಸರ್ವೆ: ಬಿಬಿಎಂಪಿ ಜಂಟಿ ಆಯುಕ್ತರಿಂದ ಮಾಹಿತಿ
ಈ ನಿಟ್ಟಿನಲ್ಲಿ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಡ್ರೋನ್ ಸರ್ವೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್, ಪಾಲಿಕೆಯ ವ್ಯಾಪ್ತಿಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಂದಾಯ ಅಧಿಕಾರಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲು ತೀರ್ಮಾನಿಸಲಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡುವವರು ಹಾಗೂ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ಕಟ್ಟದಿದ್ದರೆ ಡ್ರೋನ್ ಟೆಕ್ನಾಲಜಿಯನ್ನು ಬಳಸಲಾಗುವುದು ಎಂದರು.
ಆಸ್ತಿ ಕಳ್ಳರ ವಂಚನೆ ಪತ್ತೆ ಹಚ್ಚಲು ಡ್ರೋನ್ ಸಹಾಯಕ್ಕೆ ಪಾಲಿಕೆಯು ಬೆಸ್ಕಾಂ ಮೊರೆ ಹೋಗಲಿದೆ. ಬೆಸ್ಕಾಂ ಬಿಲ್ ಆಧರಿಸಿ ತಪ್ಪು ಮಾಹಿತಿ ನೀಡಿದವರಿಗೆ ದಂಡ ಹಾಕುವ ಕೆಲಸ ಮಾಡಲಿದೆ. ಇದಕ್ಕಾಗಿ ಒಬ್ಬೊಬ್ಬ ಕಂದಾಯ ಅಧಿಕಾರಿಗಳಿಗೆ ಇಂತಿಷ್ಟು ತೆರಿಗೆ ಸಂಗ್ರಹ ಮಾಡಬೇಕು ಎಂಬ ಟಾರ್ಗೆಟ್ ನೀಡಲಾಗುತ್ತದೆ. ಕಂದಾಯ ಅಧಿಕಾರಿಗಳ ಕಾರ್ಯವೈಖರಿ ಅಳೆಯಲು ಇದು ಸಹಾಯವಾಗಲಿದ್ದು, ಉತ್ತಮ ಕೆಲಸ ಮಾಡಿದವರಿಗೆ ಸನ್ಮಾನ, ಮಾಡದೇ ಇರುವವರಿಗೆ ಗೇಟ್ ಪಾಸ್ ಕೊಡಲು ತೀರ್ಮಾನಿಸಲಾಗಿದೆ.
ಡ್ರೋನ್ ಪ್ರಯೋಗ ಒಂದು ಕಡೆಯಾದರೆ ಮತ್ತೊಂದು ಕಡೆ ಇ-ಆಸ್ತಿ ತಂತ್ರಾಂಶ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಬೆಂಗಳೂರು ಒನ್ ಸೆಂಟರ್‌ಗಳ ಮೂಲಕ ತಂತ್ರಾಂಶ ಬಳಕೆಗೆ ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಂದು ಆಸ್ತಿಯ ಮಾಹಿತಿ ಆನ್ ಲೈನ್ ಸೇವೆ ಮೂಲಕ ಸಿಗಲಿದ್ದು, ಜತೆಗೆ ಮುಂದಿನ ದಿನಗಳಲ್ಲಿ ಖಾತಾ ನೇರವಾಗಿ ಡಿಜಿಲಾಕರ್‌ಗೆ ಹೋಗುವ ವ್ಯವಸ್ಥೆಯನ್ನು ಮೊದಲು ಪ್ರಾಯೋಗಿಕವಾಗಿ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ನಡೆಯಲಿದೆ.
ಮೋದಿ ಆಗಮನ ಫ್ಲೆಕ್ಸ್, ಬ್ಯಾನರ್ ಹಾಕಲು ಅನುಮತಿ
ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕುವ ಮುನ್ನ ಎಚ್ಚರವಾಗಿ ಇರುವಂತೆ ಪಾಲಿಕೆ ವಿಶೇಷ ಆಯುಕ್ತ ದೀಪಕ್ ಎಚ್ಚರಿಕೆ ನೀಡಿದ್ದಾರೆ. ಅನಧಿಕೃತವಾಗಿ ಫ್ಲೆಕ್ಸ್ ಹಾಕುವುದು, ಬ್ಯಾನರ್‌ನಲ್ಲಿ ಮೂಲಕ ಶುಭಕೋರುವುದು ಮಾಡಿದರೆ ಅಂತಹವರ ಮೇಲೆ ದಂಡ ಪ್ರಯೋಗ ಮಾಡಲಾಗುವುದು. ಬ್ಯಾನರ್ ತೆಗೆಯುವ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕೆಲ ಕಡೆಗಳಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಲು ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ.
ಬಿಬಿಎಂಪಿ ವಾರ್ಡ್ ಮರುವಿಂಗಡನೆ ವಿಚಾರ
ಬಿಬಿಎಂಪಿ ಕಡೆಯಿಂದ ವಾರ್ಡ್ ವಿಂಗಡನೆ ಮಾಡಿ ನಗರಾಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಕಳುಹಿಸಿದ ಬಳಿಕ ಅನುಮೋದನೆ ಸಿಗಲಿದೆ. ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ದೀಪಕ್ ತಿಳಿಸಿದ್ದಾರೆ.
ಇದನ್ನೂ ಓದಿ | ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?