ಬೆಂಗಳೂರು: ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಮೇರೆಗೆ ಸಿಐಡಿ ವಿಶೇಷ ತನಿಖಾ ತಂಡ ಉದ್ಯಮಿ ಸುಶೀಲ್ ಮಂತ್ರಿಯನ್ನು (Arrest Case) ಬಂಧಿಸಿದೆ. ದಕ್ಷಿಣ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಗ್ರೂಪ್ ಮೇಲೆ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಪ್ರತಿಷ್ಠಿತ ಮಂತ್ರಿ ಸಮೂಹ ಸಂಸ್ಥೆಯ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿತ್ತು. ಇದೀಗ ಮತ್ತೆ ವಂಚನೆ ಆರೋಪದಡಿ ಸಿಐಡಿ ತಂಡ ಬಂಧಿಸಿದೆ.
ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪ
ಶುಕ್ರವಾರ ರಾತ್ರಿ (ಸೆ.9) ಸಿಐಡಿ ಎಡಿಜಿಪಿ ರವಿ ಉಮೇಶ್ ಟೀಂನಿಂದ ಉದ್ಯಮಿ ಸುಶೀಲ್ ಮಂತ್ರಿ ಬಂಧನಕ್ಕೆ ಒಳಪಟ್ಟಿದ್ದಾರೆ. ಮಂತ್ರಿ ತನ್ನ ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಜತೆಗೆ ಗ್ರಾಹಕರಿಂದ ಖರೀದಿ ಹಣ ದುರ್ಬಳಕೆ ಆರೋಪ ಕೂಡ ಕೇಳಿ ಬಂದಿದೆ. ಸಾವಿರಾರು ಗ್ರಾಹಕರಿಂದ 1000 ಕೋಟಿ ಸಂಗ್ರಹಿಸಿದ್ದ ಮಂತ್ರಿ 7ರಿಂದ 10 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಸುಳ್ಳು ಬ್ರೋಚರ್ಸ್ ತೋರಿಸಿ ಹಣವನ್ನು ಗಳಿಸಿ ವಂಚನೆ ಮಾಡುತ್ತಿದ್ದರು. ಈ ಬಗ್ಗೆ 2022ರಲ್ಲೇ ಸಾವಿರಾರು ಗ್ರಾಹಕರು ದೂರು ನೀಡಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಕನಕಪುರ ರಸ್ತೆಯ ಕೆಲ ಪ್ರಾಜೆಕ್ಟ್ ಗಳಲ್ಲಿ ವಂಚನೆ ಮಾಡಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಆರೋಪದ ಮೇರೆಗೆ ಸಿಐಡಿ ವಿಶೇಷ ತನಿಖಾ ತಂಡ ಮಂತ್ರಿಯನ್ನು ಬಂಧಿಸಿದೆ.
ಇದನ್ನೂ ಓದಿ | ಮಂತ್ರಿಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿಗೆ ನಿರೀಕ್ಷಣಾ ಜಾಮೀನು
ಈ ಹಿಂದೆ ನಿರೀಕ್ಷಣಾ ಜಾಮೀನಿಂದ ಹೊರ ಬಂದಿದ್ದ ಮಂತ್ರಿ
ಕಳೆದ ಜೂನ್ 25ರಂದು ಇಡಿ ಅರೇಸ್ಟ್ ಮಾಡಿ ತನಿಖೆ ಮಾಡಿದ್ದರು. ಅದಾದ ಬಳಿಕ ಜಾಮೀನಿನ ಮೇಲೆ ಮಂತ್ರಿ ಹೊರ ಬಂದಿದ್ದರು. ಇ.ಡಿ ಅಧಿಕಾರಿಗಳು ಸರ್ಚ್ ವಾರಂಟ್ ಪಡೆದು ಮಂತ್ರಿ ಗ್ರೂಪ್‌ನ ಸಿಎಂಡಿ ಸುಶೀಲ್ ಪಾಂಡುರಂಗ ಅವರಿಗೆ ಸಂಬಂಧಿಸಿದ 10 ಕಡೆಯಲ್ಲಿ ಕಳೆದ ಜೂನ್ 24ರಂದು ದಾಳಿ ನಡೆಸಿದರು. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಸುಶೀಲ್ ಅವರ ಕಚೇರಿ, ನಿವೇಶನ, ವಂಚನೆ ನಡೆದಿದೆ ಎಂದು ಹೇಳಲಾಗಿರುವ ನಿರ್ಮಾಣಗೊಂಡಿರುವ ಕಟ್ಟಡಗಳಿಗೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ, ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ಜೂನ್ 25ರಂದು ಇ.ಡಿ ಸಮನ್ಸ್ ನೀಡಿತ್ತು.
ಇದನ್ನೂ ಓದಿ | ʼಮಂತ್ರಿʼ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ್‌ಗೆ ಸಂಬಂಧಪಟ್ಟ 10 ಕಡೆಯಲ್ಲಿ ಇ.ಡಿ ದಾಳಿ