ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕರು ಗಲಾಟೆ ಮಾಡಿಕೊಂಡಿದ್ದು, ಘಟನೆಯಲ್ಲಿ ಓರ್ವ ಚಾಕು ಇರಿತಕ್ಕೆ (Assault case) ಒಳಗಾಗಿದ್ದಾನೆ. ಬೆಂಗಳೂರಿನ ಬಾಣಸವಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ (Bar Fighting) ಘಟನೆ ನಡೆದಿದೆ.
ಇಮ್ರಾನ್ ಎಂಬಾತ ಚಾಕು ಇರಿತಕ್ಕೊಳಗಾದವನು. ಪ್ರಶಾಂತ್ ಮತ್ತು ವಿಜೀರ್ ಎಂಬುವರಿಂದ ಕೃತ್ಯ ನಡೆದಿದೆ. ಸೋಮವಾರ ರಾತ್ರಿ ಬಾರ್‌ಗೆ ಬಂದಿದ್ದ ಈ ಮೂವರು ಅಕ್ಕಪಕ್ಕದ ಟೇಬಲ್‌ನಲ್ಲಿ ಕುಳಿತು ಕುಡಿಯುತ್ತಿದ್ದರು. ಅಮಲು ಏರುತ್ತಿದ್ದಂತೆ ಕ್ಷುಲ್ಲಕ ವಿಚಾರಕ್ಕೆ ಇಮ್ರಾನ್ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಇಮ್ರಾನ್‌ಗೆ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಮ್ರಾನ್‌ನನ್ನು ಬಾರ್‌ನಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Dead Body Found: ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನೇತಾಡುತ್ತಿತ್ತು ಅಪರಿಚಿತನ ಶವ
ಗಲಾಟೆ ಬಿಡಿಸಲು ಹೋದ ಮಹಿಳೆಯ ಎದೆಗೆ ಗುದ್ದಿ ಹೊಡೆದು ಕೊಂದರು
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಸಾವಿನಲ್ಲಿ (Murder case) ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಪೂರದಲ್ಲಿ ಘಟನೆ ನಡೆದಿದೆ. ತಾಯವ್ವ ಸಾಲಮಂಟಪಿ (60) ಮೃತ ದುರ್ದೈವಿ.
ಸಾರಾಯಿ ಮಾರಾಟ ಮಾಡುತ್ತಾರೆ ಎಂಬ ವಿಚಾರವನ್ನು ಕೇಳಲು ತಾಯವ್ವ ಸಹೋದರ ವಿಠ್ಠಲ ಸಾಲಮಂಟಪಿ ಹೋಗಿದ್ದರು. ಸೋಮವಾರ ರಾತ್ರಿ1 ಗಂಟೆಗೆ ಆರೋಪಿಗಳ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಠ್ಠಲ ಹಾಗೂ ಮಾದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ವಿಠ್ಠಲ ಸಹೋದರಿ ತಾಯವ್ವ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ.
ಈ ವೇಳೆ ತಾಯವ್ವಳಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಆಕೆಯ ಎದೆ ಭಾಗಕ್ಕೆ ಜೋರಾಗಿ ಗುದ್ದಿ ತಳ್ಳಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ತಾಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಿಂದೆಯೂ ಸಾರಾಯಿ ಮಾರಾಟ ಮಾಡುವ ವಿಚಾರಕ್ಕೆ ವಿಠ್ಠಲ ಸಾಲಮಂಟಪಿ ಹಾಗೂ ಮಾದರ ಕುಟುಂಬಸ್ಥರ ನಡುವೆ ಜಗಳ ಆಗಿತ್ತು. ನಿನ್ನೆಯೂ ಇದೇ ವಿಚಾರವನ್ನು ಕೇಳಲು ಹೋದಾಗ ಗಲಾಟೆ ಶುರುವಾಗಿ, ವೃದ್ಧೆಯ ಸಾವಿನಲ್ಲಿ ಅಂತ್ಯವಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿತರಾದ ಪ್ರಕಾಶ್ ಮಾದರ, ಯಮನಪ್ಪ ಮಾದರ, ಭೀಮಪ್ಪ ಮಾದರ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ, ಲೋಕಾಪುರ ಪಿಎಸ್‌ಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ತುಮಕೂರು: ಸುಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹವು (Dead Body Found) ಪತ್ತೆಯಾಗಿದೆ. ತುಮಕೂರಿನ (Tumkur News) ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿಯ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ (Highway Road) ಪಕ್ಕದಲ್ಲಿ ಘಟನೆ ನಡೆದಿದೆ.
ಸುಮಾರು 25 ವರ್ಷದ ಯುವತಿಯನ್ನು ಕೊಲೆ ಮಾಡಿ ಬಳಿಕ ಗುರುತು ಸಿಗಬಾರೆಂದು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಅರ್ಧಂಬರ್ಧ ಸುಟ್ಟಿರುವ ಯುವತಿ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯುವತಿ ಮುಖವು ಸಂಪೂರ್ಣ ಸುಟ್ಟು ಹೋಗಿದ್ದು, ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ