Site icon Vistara News

Assault Case: ಉಬರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ! ಅಲ್ಲಿ ಏನಾಯಿತು?

assault case

ಬೆಂಗಳೂರು: ರಾಜಧಾನಿಯಲ್ಲಿ ಉಬರ್‌ ಟ್ಯಾಕ್ಸಿ ಚಾಲಕನೊಬ್ಬ (uber driver) ಮಹಿಳೆಯೊಬ್ಬರ ಮೇಲೆ ಹಲ್ಲೆ (Assault Case) ನಡೆಸಿದ ಘಟನೆ ಬೋಗನಹಳ್ಳಿಯಲ್ಲಿ ನಡೆದಿದೆ. ಈ ಹಲ್ಲೆಗೆ ಮಹಿಳೆ ಮಾಡಿದ ನಿಂದನೆಯೂ ಕಾರಣವಾಗಿದೆ.

ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು. ಇದರ ಅರಿವಿಲ್ಲದೇ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತಿದ್ದರು. ಬಳಿಕ ಇದು ಬೇರೆ ಕ್ಯಾಬ್ ಎಂದು ಅರಿತು ಕ್ಯಾಬ್ ಇಳಿಯಲು ಯತ್ನಿಸಿದ್ದರು. ಈ ವೇಳೆ ಚಾಲಕ ಕಾರು ಚಲಾಯಿಸಲು ಮುಂದಾಗಿದ್ದ. ಮಹಿಳೆ ಆಕ್ಷೇಪಿಸಿದಾಗ, ದಿಢೀರನೆ ಕ್ಯಾಬ್ ನಿಲ್ಲಿಸಿ ಇಳಿದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಮುಂದಾಗಿದ್ದಾನೆ ಎಂದು ದೂರಲಾಗಿದೆ.

ಕ್ಯಾಬ್ ಚಾಲಕ ಬಸವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಹೇಳಿಕೆ ಹೀಗಿದೆ: ಅದೇ ಅಪಾರ್ಟ್‌ಮೆಂಟಿನಲ್ಲಿ ಎರಡು ಕ್ಯಾಬ್ ಬುಕ್ ಆಗಿದ್ದವು. ಮಹಿಳೆ ಬುಕ್ ಮಾಡಿದ್ದು ಬೇರೆಯ ಕ್ಯಾಬ್.‌ ಆದರೆ ಅದೇ ಸಮಯಕ್ಕೆ ಬಂದ ಬಸವರಾಜ್ ಕ್ಯಾಬ್ ಅನ್ನು ಆಕೆ ಹತ್ತಿದ್ದಾರೆ. 100 ಮೀಟರ್ ದೂರದಲ್ಲಿ ಇದು ಗೊತ್ತಾಗಿ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ದಬಾಯಿಸಿದ್ದಾರೆ. ಏಕವಚನದಲ್ಲೇ ಕ್ಯಾಬ್ ಡ್ರೈವರ್ ಅನ್ನು ನಿಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ನಂತರ ಮಹಿಳೆ ಕೆಳಗಿಳಿದು ಡೋರ್ ಜೋರಾಗಿ ಹಾಕಿದ್ದಾರೆ. ತನ್ನ ತಾಯಿಯಂತೆ ಕ್ಯಾಬ್ ಅನ್ನು ನೋಡಿಕೊಳ್ಳುತ್ತಿದ್ದ ಚಾಲಕ ಇದರಿಂದ ಕೋಪಗೊಂಡು ಮಹಿಳೆಯನ್ನು ನೂಕಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ದೃಶ್ಯ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೆಣ್ಣು ಕೊಡಲಿಲ್ಲ ಎಂದು ಅಡಿಕೆ ಹಾಳು ಮಾಡಿದ!

ಮೈಸೂರು: ಮದುವೆಯಾಗಲು ಹೆಣ್ಣು ಕೊಡಲಿಲ್ಲ ಅಂತ ಭೂಪನೊಬ್ಬ ರೈತರೊಬ್ಬರ ಮನೆಯ ಅಡಿಕೆಯನ್ನೆಲ್ಲ ಹಾಳು ಮಾಡಿದ್ದಾನೆ. ಹುಣಸೂರು ತಾಲೂಕಿ‌ನ ಕಡೇ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅವರ ಮಗಳನ್ನು ತನಗೆ ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಅಡಿಕೆ ಬೆಳೆ ನಾಶ ಮಾಡಿದವನು ಹೆಸರು ಅಶೋಕ್. ರೈತ ವೆಂಕಟೇಶ್ ಅವರಿಗೆ ಸೇರಿದ ಜಮೀನು ಇದಾಗಿದೆ. ನಾಲ್ಕು ದಿನಗಳ ಹಿಂದೆ ಅವರ ಶುಂಠಿ ಬೆಳೆಯನ್ನು ಈತ ಕತ್ತರಿಸಿ ಹಾಕಿದ್ದ.

ವೆಂಕಟೇಶ್ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಶುಂಠಿ, ಅಡಿಕೆ ಬೆಳೆ ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಿತ್ತು. ಇದೇ ವೇಳೆ ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳನ್ನು ಸೇರಿಸಿಕೊಂಡು ಅಡಿಕೆ ಬೆಳೆ ಕತ್ತರಿಸಿದ್ದಾನೆ. ವೆಂಕಟೇಶ್ ಪುತ್ರಿಯನ್ನು ಅದೇ ಗ್ರಾಮದ ಬೇರೊಬ್ಬರಿಗೆ ವಿವಾಹ ಮಾಡಿಸಲು ಮಾತುಕತೆ ನಡೆದಿತ್ತು. ಅಶೋಕ್ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಕಾರಣಕ್ಕೆ ನಿರಾಕರಣೆ ಮಾಡಲಾಗಿತ್ತು. ಇದರಿಂದಾಗಿ ದ್ವೇಷ ಬೆಳೆಸಿಕೊಂಡ ಅಶೋಕ್ ಬೆಳೆ ನಾಶ ಮಾಡಿದ್ದಾನೆ ಎಂದು ಹುಡುಗಿಯ ತಂದೆ ವೆಂಕಟೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: Assault Case : ದಾರಿ ಬಿಡಿ ಎಂದಿದ್ದಕ್ಕೆ ಅಟ್ಟಾಡಿಸಿ ಕಲ್ಲು ಎತ್ತಿಹಾಕಿದ ಭೂಪ!

Exit mobile version