ಬೆಂಗಳೂರು/ಕಲಬುರಗಿ: ನಡು ರಸ್ತೆಯಲ್ಲಿ ಯುವಕರಿಬ್ಬರು ಸೇರಿ ರಾಡ್‌ನಿಂದ ವ್ಯಕ್ತಿಗೆ ಮನಬಂದಂತೆ (Assault Case) ಥಳಿಸಿದ್ದಾರೆ. ಬೆಂಗಳೂರಿನ ಕಲ್ಯಾಣನಗರದ ಡಿಪೋ ಮುಂಭಾಗದಲ್ಲಿ ನಡೆದಿರುವ ಘಟನೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.
ಮೂರು ದಿನ ಹಿಂದೆ ಘಟನೆ ನಡೆದಿದ್ದು, ಇದುವರೆಗೆ ಪೊಲೀಸರಿಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಹಾಕಿ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಆ ವ್ಯಕ್ತಿ ಬದುಕಿದಾನೋ ಸತ್ತಿದಾನೋ ಎಂಬ ವಿಚಾರ ಕೂಡ ತಿಳಿದಿಲ್ಲ. ಸದ್ಯ ವೈರಲ್ ಆಗಿರುವ ವಿಡಿಯೋ ಬಗ್ಗೆ ತಿಳಿಯಲು ಪೊಲೀಸರು ಫ್ಯಾಕ್ಟ್ ಚೆಕ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: Dead Body Found : ಪಾರ್ಕ್‌ನ ಪೊದೆಯಲ್ಲಿತ್ತು ನಿವೃತ್ತ ಬ್ಯಾಂಕ್ ನೌಕರನ ಕೊಳೆತ ಶವ
ನಡುರಸ್ತೆಯಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ
ಆಸ್ತಿಗಾಗಿ ಎರಡು ಕುಟುಂಬಗಳು ಬೀದಿ ರಂಪಾಟ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾಗ್ಯಶ್ರೀ ಹಾಗೂ ಆಕೆಯ ಸಹೋದರ ಶಿವಾನಂದ ಎಂಬಾತ ಪ್ರಭಾವತಿ ಎಂಬುವವರಿಗೆ ರಸ್ತೆಯಲ್ಲಿಯೇ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇತ್ತ ಗಲಾಟೆ ಬಿಡಿಸಿ, ಮಹಿಳೆಯ ಸಹಾಯಕ್ಕೆ ಹೋದ ಸಾರ್ವಜನಿಕರ ಮೇಲೆ ಅಕ್ಕ-ತಮ್ಮ ಹಲ್ಲೆಗೆ ಮುಂದಾದರು. ಈ ವೇಳೆ ಸಿಟ್ಟಾದ ಸಾರ್ವಜನಿಕರು ಶಿವಾನಂದನನ್ನು ಹಿಡಿದು ಥಳಿಸಿದ್ದಾರೆ. ಮದ್ಯಪಾನ ಮಾಡಿದ್ದ ಶಿವಾನಂದ ರಸ್ತೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದ. ಸದ್ಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್ ಭಾಗಿ!
ಬಾರ್‌ನಲ್ಲಿ ಕುಡುಕರ ಗಲಾಟೆ; ಓರ್ವನಿಗೆ ಚಾಕು ಇರಿತ
ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕರು ಗಲಾಟೆ ಮಾಡಿಕೊಂಡಿದ್ದು, ಘಟನೆಯಲ್ಲಿ ಓರ್ವ ಚಾಕು ಇರಿತಕ್ಕೆ (Assault case) ಒಳಗಾಗಿದ್ದಾನೆ. ಬೆಂಗಳೂರಿನ ಬಾಣಸವಾಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ (Bar Fighting) ಘಟನೆ ನಡೆದಿದೆ.
ಇಮ್ರಾನ್ ಎಂಬಾತ ಚಾಕು ಇರಿತಕ್ಕೊಳಗಾದವನು. ಪ್ರಶಾಂತ್ ಮತ್ತು ವಿಜೀರ್ ಎಂಬುವರಿಂದ ಕೃತ್ಯ ನಡೆದಿದೆ. ಸೋಮವಾರ ರಾತ್ರಿ ಬಾರ್‌ಗೆ ಬಂದಿದ್ದ ಈ ಮೂವರು ಅಕ್ಕಪಕ್ಕದ ಟೇಬಲ್‌ನಲ್ಲಿ ಕುಳಿತು ಕುಡಿಯುತ್ತಿದ್ದರು. ಅಮಲು ಏರುತ್ತಿದ್ದಂತೆ ಕ್ಷುಲ್ಲಕ ವಿಚಾರಕ್ಕೆ ಇಮ್ರಾನ್ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಇಮ್ರಾನ್‌ಗೆ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಮ್ರಾನ್‌ನನ್ನು ಬಾರ್‌ನಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಗಲಾಟೆ ಬಿಡಿಸಲು ಹೋದ ಮಹಿಳೆಯ ಎದೆಗೆ ಗುದ್ದಿ ಹೊಡೆದು ಕೊಂದರು
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಸಾವಿನಲ್ಲಿ (Murder case) ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಪೂರದಲ್ಲಿ ಘಟನೆ ನಡೆದಿದೆ. ತಾಯವ್ವ ಸಾಲಮಂಟಪಿ (60) ಮೃತ ದುರ್ದೈವಿ.
ಸಾರಾಯಿ ಮಾರಾಟ ಮಾಡುತ್ತಾರೆ ಎಂಬ ವಿಚಾರವನ್ನು ಕೇಳಲು ತಾಯವ್ವ ಸಹೋದರ ವಿಠ್ಠಲ ಸಾಲಮಂಟಪಿ ಹೋಗಿದ್ದರು. ಸೋಮವಾರ ರಾತ್ರಿ1 ಗಂಟೆಗೆ ಆರೋಪಿಗಳ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಠ್ಠಲ ಹಾಗೂ ಮಾದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ. ವಿಠ್ಠಲ ಸಹೋದರಿ ತಾಯವ್ವ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ.
ಈ ವೇಳೆ ತಾಯವ್ವಳಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಆಕೆಯ ಎದೆ ಭಾಗಕ್ಕೆ ಜೋರಾಗಿ ಗುದ್ದಿ ತಳ್ಳಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ತಾಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹಿಂದೆಯೂ ಸಾರಾಯಿ ಮಾರಾಟ ಮಾಡುವ ವಿಚಾರಕ್ಕೆ ವಿಠ್ಠಲ ಸಾಲಮಂಟಪಿ ಹಾಗೂ ಮಾದರ ಕುಟುಂಬಸ್ಥರ ನಡುವೆ ಜಗಳ ಆಗಿತ್ತು. ನಿನ್ನೆಯೂ ಇದೇ ವಿಚಾರವನ್ನು ಕೇಳಲು ಹೋದಾಗ ಗಲಾಟೆ ಶುರುವಾಗಿ, ವೃದ್ಧೆಯ ಸಾವಿನಲ್ಲಿ ಅಂತ್ಯವಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿತರಾದ ಪ್ರಕಾಶ್ ಮಾದರ, ಯಮನಪ್ಪ ಮಾದರ, ಭೀಮಪ್ಪ ಮಾದರ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ, ಲೋಕಾಪುರ ಪಿಎಸ್‌ಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ