Site icon Vistara News

Assault Case : ಪರ ಪುರುಷನೊಟ್ಟಿಗೆ ಮಾತನಾಡಿದ್ದಕ್ಕೆ ಪತ್ನಿಗೆ ಚಾಕು ಹಾಕಿದ ಸೈಕೋ ಪತಿ

Assault Case in bengaluru Husband Assault to wife

ಬೆಂಗಳೂರು: ಸಹೋದ್ಯೋಗಿ ಜತೆ ಮಾತನಾಡಿದ್ದಕ್ಕೆ ಸೈಕೋ ಪತಿಯೊಬ್ಬ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಜೆಪಿ ನಗರದ 5ನೇ ಹಂತದ ವಿನಾಯಕ ನಗರದಲ್ಲಿ ಘಟನೆ (Bengaluru News) ನಡೆದಿದೆ. ಬಿಂದು ಹಲ್ಲೆಗೊಳಗಾದವರು. ಬಿಂದು ಪತಿ ನವೀನ್‌ ಎಂಬಾತನೇ (Assault case) ಹಲ್ಲೆ ನಡೆಸಿದವನು.

2012ರಲ್ಲಿ ಮದುವೆಯಾದ ಬಿಂದು ಹಾಗೂ ನವೀನ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮನೆ ನಿರ್ವಹಣೆಗಾಗಿ ಬಿಂದು ಎಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊನ್ನೆ ಭಾನುವಾರ ಕೆಲಸದ ಬಗ್ಗೆ ಚರ್ಚಿಸಲು ಬಿಂದು ಮನೆಗೆ ಆಫೀಸ್‌ನಿಂದ ಸಹೋದ್ಯೋಗಿಯೊಬ್ಬರು ಬಂದಿದ್ದರು.

ತನ್ನ ಪತ್ನಿ ಪುರುಷ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡ ನವೀನ್, ಕೈಗೆ ಸಿಕ್ಕ ಚಾಕು ಮತ್ತು ಕತ್ತರಿಯಿಂದ ಬಿಂದು ಮೇಲೆ ಹಲ್ಲೆ ನಡೆಸಿದ್ದಾನೆ. ಪತ್ನಿ ಆಫೀಸ್‌ನಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಬಿಂದು ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: Priest Marriage: 12 ವರ್ಷದ ಬಾಲಕಿಯ ಮದುವೆಯಾದ ಧರ್ಮಗುರು; ಗಲ್ಲಿಗೇರಿಸಲು ಆಗ್ರಹ

ಸಂಶಯ ಪಿಶಾಚಿ

ಈ ನವೀನ್‌ ಮದುವೆಯಾದ ಕೆಲವೇ ದಿನದಲ್ಲಿ ಪತ್ನಿ ಬಿಂದು ಮೇಲೆ ಸಂಶಯವನ್ನು ಹೊಂದಿದ್ದ. ಪತ್ನಿ ಮೇಲೆ ಅನುಮಾನ ಪಡುವುದು, ಫೋನ್‌ನಲ್ಲಿ ಮಾತನಾಡಿದರೆ ಯಾವನ್‌ ಜತೆ ಮಾತನಾಡುತ್ತೀಯಾ ಎಂದೆಲ್ಲ ಅವಾಚ್ಯ ಶಬ್ಧಗಳಿಂದ ಬೈಯುವುದು ಮಾಡುತ್ತಿದ್ದನಂತೆ. ಇತ್ತೀಚೆಗೆ ಕಳೆದ 2 ವರ್ಷಗಳಿಂದ ಈತನ ಅನುಮಾನದ ಸ್ವಭಾವವು ದುಪ್ಪಟ್ಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಲೆ ಯತ್ನ

ಈತನ ಅನುಮಾನವು ಎಷ್ಟರ ಮಟ್ಟಿಗೆ ಇತ್ತು ಎಂದರೆ, ಹಿಂದೊಮ್ಮೆ ಬಿಂದುನನ್ನು ಕೊಲ್ಲಲ್ಲು ಪ್ರಯತ್ನಿಸಿದ್ದನಂತೆ. ಹಿಂದೊಮ್ಮೆ ಬನ್ನೇರುಘಟ್ಟ ಕಾಡಿಗೆ ಕರೆದುಕೊಂಡು ಹೋಗಿ ಜಗಳ ಮಾಡಿ, ಕಬ್ಬಿಣದ ರಾಡ್‌ನಿಂದ ಹೊಡೆದು, ಹಲ್ಲೆ ಮಾಡಿ ಸಾಯಿಸಲು ಪ್ರಯತ್ನಿಸಿದ್ದ. ಆದರೆ ಅಲ್ಲಿಂದ ಹೇಗೋ ಬಿಂದು ತಪ್ಪಿಸಿಕೊಂಡು ಪಾರಾಗಿ ಬಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನವೀನ್‌ ಕಳೆದ ಮಾ. 31ರಂದು ಕೆಲಸದ ಬಗ್ಗೆ ಮಾತನಾಡಲು ಸಹೋದ್ಯೋಗಿ ಬಂದಾಗ, ಏಕಾಏಕಿ ನವೀನ್‌ ಜಗಳ ಮಾಡಿದ್ದಾನೆ.

ಸಹೋದ್ಯೋಗಿ ಜತೆಗೆ ಸಂಬಂಧ ಕಟ್ಟಿ, ಕೆಟ್ಟ ಶಬ್ಧಗಳಿಂದ ನಿಂದಿಸುತ್ತಾ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲ ಮನೆಯಲ್ಲಿದ್ದ ಚಾಕು, ಕತ್ತರಿಯಿಂದ ಬಿಂದುವಿಗೆ ಚುಚ್ಚಿದ್ದಾನೆ. ಸದ್ಯ ಗಾಯಾಳು ಬಿಂದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ನವೀನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version