ಬೆಂಗಳೂರು: ಮೊಬೈಲ್ ಅಂಗಡಿಯಲ್ಲಿ (Mobile Shop) ಭಕ್ತಿಗೀತೆಯನ್ನು (Devotional Song) ಹಾಕಿದಕ್ಕೆ ಕೆಲ ಯುವಕರು ಕಿರಿಕ್ ತೆಗೆದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ನಗರತ್ ಪೇಟೆಯಲ್ಲಿ (Nagaratpet) ಭಾನುವಾರ ಸಂಜೆ (Assault Case) ಘಟನೆ ನಡೆದಿದೆ.
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಸಂಬಂಧ ನಿನ್ನೆ ಐವರನ್ನು ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ಮೂವರನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು, ಸೋಮವಾರ ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.
ಏನಿದು ಘಟನೆ?
ಭಾನುವಾರ ಸಂಜೆ 6:30ರ (ಮಾ.17) ಸುಮಾರಿಗೆ ಐದಾರು ಯುವಕರು ಗ್ಯಾಂಗ್ ಕಟ್ಟಿಕೊಂಡು ಬಂದಿದ್ದರು. ನರ್ಗತ್‌ಪೇಟೆಯಲ್ಲಿರುವ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಬಳಿ ಬಂದು ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕುತ್ತೀಯಾ ಎಂದು ಕಿರಿಕ್ ತೆಗೆದಿದ್ದರು. ಈ ವೇಳೆ ಮುಖೇಶ್ ಎಂಬಾತನನ್ನು ಅಂಗಡಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಮುಖೇಶ್ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಎಫ್ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ನೂರಾರು ಜನರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸರು ಎಫ್ಐಆರ್ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ, ಐವರು ಬಂಧಿಸಿದ್ದರು.
ಇದನ್ನೂ ಓದಿ: Bengaluru News : ಕರುವಿನ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿದರೂ ಬಿಡಲಿಲ್ಲ ಕಲಿಯುಗದ ಈ ರಾಕ್ಷಸ
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖೇಶ್, ಅಂಗಡಿಯಲ್ಲಿ ಭಜನೆ ಹಾಡುಗಳನ್ನು ಹಾಕುತ್ತಿದ್ದೆ. ಈ ವೇಳೆ ಅಂಗಡಿಗೆ ಬಂದ ಕೆಲ ಯುವಕರು ನಮಾಜ್ ಸಮಯದಲ್ಲಿ ಯಾಕೆ ಹಾಡು ಹಾಕುತ್ತೀಯಾ ಎಂದು ಪ್ರಶ್ನೆ ಮಾಡಿದರು. ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಆದರೆ ಸ್ಪೀಕರ್‌ನಿಂದ ನನ್ನ ತಲೆಗೆ ಹೊಡೆದು, ಎಳೆದಾಡಿ ಹಲ್ಲೆ ಮಾಡಿದರು.
ಒಟ್ಟು ಆರು ಜನ ಬಂದಿದ್ದರು. ಯಾರ್ಯಾರು ಎಂಬ ಹೆಸರು ಗೊತ್ತಿಲ್ಲ. ಈ ಮುಂಚೆ ನನಗೆ ಯಾವುದೇ ಪರಿಚಯ ಇಲ್ಲ. ಕಳೆದ ಎರಡು ತಿಂಗಳಿನಿಂದ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ಹಣ ಕೀಳಲು ಗದರಿಸುವ ಪ್ರಯತ್ನ ಮಾಡುತ್ತಿದ್ದರು. ನಾನು ಯಾವುದೇ ಹಣವನ್ನು ಕೊಡುತ್ತಿರಲಿಲ್ಲ. ನಿನ್ನೆ ಭಾನುವಾರ ಇದೇ ರಿವೆಂಜ್ ಇಟ್ಟುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಮುಖೇಶ್ ತಿಳಿಸಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 504 , 149 , 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದೆ. ಸುಲೇಮಾನ್, ಶನವಾಜ್, ರೋಹಿತ್, ದ್ಯಾನಿಶ್, ತರುಣ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ