Site icon Vistara News

Assault | ಪೈಲ್ಸ್‌ಗೆ ಚಿಕಿತ್ಸೆ ಕೊಡುತ್ತೇನೆ ಎಂದು ವಂಚಿಸಿದವನಿಗೆ ಹಿಂಭಾಗದಲ್ಲಿ ರಕ್ತ ಸೋರುವಂತೆ ಹಲ್ಲೆ!

govindapura assault

ಬೆಂಗಳೂರು: ಪೈಲ್ಸ್‌ಗೆ ಆಯುರ್ವೇದ ಔಷಧಿ ಕೊಡುತ್ತೇನೆ ಎಂದು ಬಂದವನ ಔಷಧ ಪರಿಣಾಮ ಬೀರದೇ ಹೋದುದರಿಂದ ರೊಚ್ಚಿಗೆದ್ದ ಸ್ನೇಹಿತರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಈಗ ಅಂದರ್‌ ಆಗಿದ್ದಾರೆ.

ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ಮುರುಗನ್ ಎಂಬಾತ ಹಲ್ಲೆಗೊಳಗಾದಾತ. ಈತ 10 ಸಾವಿರ ಹಣ ಪಡೆದು ಪೈಲ್ಸ್‌ ನಿವಾರಣೆಗೆಂದು ಆಯುರ್ವೇದದ್ದು ಎಂದು ಹೇಳಲಾದ ಔಷಧಿ ನೀಡಿದ್ದ. ಆದರೆ ಔಷಧಿಯಿಂದ ಸ್ನೇಹಿತರ ಕಾಯಿಲೆಗೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಮುರುಗನ್‌ನನ್ನು ಗೋವಿಂದಪುರಕ್ಕೆ ಕರೆಸಿಕೊಂಡಿದ್ದ ಆರೋಪಿಗಳು, ರೂಮಿನಲ್ಲಿ ಆತನನ್ನು ಕೂಡಿ ಹಾಕಿ ದೊಣ್ಣೆ, ಸಿಮೆಂಟ್ ಕಲಸುವ ಕರಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಿಂಭಾಗಕ್ಕೆ ಹಲ್ಲೆ ಮಾಡಿ ರಕ್ತ ಸೋರುವಂತೆ ಮಾಡಿದ್ದರು. ರಕ್ತದ ಮಡುವಿನಲ್ಲಿ ಆತ ಒದ್ದಾಡುತ್ತಿದ್ದುದನ್ನು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವಂತೆ ಕಳಿಸಿದ್ದರು.’

ಇದನ್ನೂ ಓದಿ | ನಾನೇ ಡಾಕ್ಟರ್‌ ಎಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಲ್ಯಾಬ್‌ ಟೆಕ್ನಿಷಿಯನ್‌ ಬಂಧನ

ಕೆ.ಆರ್.ಪುರಂ ಬಳಿ ನಿಂತಿದ್ದ ಆರೋಪಿಗಳ ಬಟ್ಟೆ ಮೇಲಿನ ರಕ್ತ ಕಂಡ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಬಳಿಕ ಎರಡು ಮೂರು ದಿನದಿಂದ ಮುರುಗನ್‌ಗಾಗಿ ತಮಿಳುನಾಡಿನಲ್ಲಿ ಗೋವಿಂದಪುರ ಪೊಲೀಸರು ಹುಡುಕಾಟ ನಡೆಸಿದ್ದು, ಆತನ ತಾಯಿಯನ್ನು ಭೇಟಿಯಾಗಿದ್ದರು. ಮಗ ಮನೆ ಬಿಟ್ಟು ಹೋದವನು ಬಂದಿಲ್ಲ ಎಂದು ತಾಯಿ ಹೇಳಿದ್ದಳು. ಹಲ್ಲೆ ಬಳಿಕ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುರುಗನ್ ಅಲ್ಲಿಂದ ತೆರಳಿದ್ದು, ಆತನನ್ನು ಹುಡುಕಲಾಗುತ್ತಿದೆ. ಮುರುಗನ್ ಆ ಕಾಯಿಲೆ, ಈ ಕಾಯಿಲೆಗೆ ಔಷಧಿ ಕೊಡುತ್ತೇನೆ ಎಂದು ಹಣ ಪಡೆದು ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Thief Case | ಡಾಕ್ಟರ್‌ ಸೋಗಿನಲ್ಲಿ ಬಂದು ರೋಗಿಗಳ ಬಂಗಾರ ಕದ್ದು ಪರಾರಿಯಾದ ಕಳ್ಳಿ

Exit mobile version