ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ (Karnataka Assembly session) ರಾಜ್ಯಪಾಲ ತ್ಯಾವರಚಂದ್ ಗೆಹ್ಲೋಟ್ ಅವರು ಮಾಡಿದ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಗುರುವಾರ (ಜುಲೈ 13) ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರು (Congress MLA KM Shivalingegowda) ಹಾಗೂ ಬಿಜೆಪಿ ಶಾಸಕ, ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ (Dr. CN Ashwathanarayana) ನಡುವೆ ಸವಾಲು ಪಾಲಿಟಿಕ್ಸ್ ಜೋರಾಗಿ ನಡೆಯಿತು.
ಚರ್ಚೆಯಲ್ಲಿ ಪಾಲ್ಗೊಂಡ ಶಿವಲಿಂಗೇಗೌಡ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು ಒಂಬತ್ತು ವರ್ಷಗಳ ಕಳೆದರೂ ಕೊಟ್ಟ ಭರವಸೆ ಈಡೇರಿಸಿಲ್ಲ. ನಾವು ಕೇಂದ್ರಕ್ಕೆ ತೆರಿಗೆ ಸಂಗ್ರಹ ಮಾಡಿ ಕಳುಹಿಸಿಕೊಡುವುದು ಆಮೇಲೆ ನಾವೇ ಅವರ ಬಳಿ ಅಂಗಲಾಚುವುದೇ ಆಗಿದೆ ಎಂದು ವಾಗ್ದಾಳಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಮಾಜಿ ಸಚಿವ ಆರ್ ಆಶೋಕ್ ಅವರು ಮೋದಿ ಕಾಲದಲ್ಲಿ ಯುಪಿಎಗಿಂತಲೂ ಐದು ಪಟ್ಟು ಹೆಚ್ಚು ಹಣ ಬಿಡುಗಡೆ ಆಗಿದೆ ಎಂದು ವಿವರಿಸಿದರು.
ಶಿವಲಿಂಗೇಗೌಡರ ಮಾತಿಗೆ ಬಿಜೆಪಿ ಶಾಸಕರು ಪದೇಪದೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎದ್ದು ನಿಂತು ಮಾತನಾಡಿದ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು, ಶಿವಲಿಂಗೇಗೌಡರೇ ಬಿಜೆಪಿ ಕೇಂದ್ರದ ಬಗ್ಗೆ ಹೆಚ್ಚು ಮಾತನಾಡಬೇಡಿ. ದೆಹಲಿಯಲ್ಲಿ ಇವರನ್ನ ಗಮನಿಸುತ್ತಿದ್ದಾರೆ. ಯಾರು ಎಷ್ಟು ಮಾತನಾಡ್ತಾರೆ ಅಂತ ಪರೀಕ್ಷೆ ಮಾಡ್ತಿದ್ದಾರೆ. ಹೀಗಾಗಿ ಒಬ್ಬರಿಗಿಂತ ಒಬ್ಬರು ಎದ್ದು ನಿಂತು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರ ಕಾಳೆಲೆದರು.
ತಕ್ಷಣ ಎದ್ದ ಅಶ್ವಥ್ ನಾರಾಯಣ ಅವರು, ʻʻನೀವು ನಮ್ಮಲ್ಲಿ ಇದ್ದವರು. ಈಗ ಅಲ್ಲಿ ಹೋಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದೀರಿʼʼ ಎಂದು ಹೇಳಿದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೊರ ಬಂದು ಗೆದ್ದು ಬಂದಿದ್ದೇನೆ ಅಂದರು ಸವದಿ.
ಆಗ ಎದ್ದು ನಿಂತ ಮಾತನಾಡಿದ ಆರ್. ಅಶೋಕ್ ಅವರು, ʻʻ ಶಿವಲಿಂಗೇಗೌಡರೇ ನೀವು ಮೊದಲು ಜೆಡಿಎಸ್‌ನಲ್ಲಿ ಇದ್ರಿ. ಈಗ ಕಾಂಗ್ರೆಸ್‌ನಲ್ಲಿದ್ದೀರಿ. ಮುಂದೆ ಮತ್ತೆ ಜೆಡಿಎಸ್ ಗೆ ಹೋಗಬಹುದುʼʼ ಎಂದು ಕಾಲೆಳೆದರು. ಆಗ ಶಿವಲಿಂಗೇಗೌಡರು ʻʻನಾನು ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿ ಗೆದ್ದು ಬಂದಿದ್ದೇವೆ. ತಾಕತ್ತಿದ್ದರೆ ನೀವು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದು ಗೆಲ್ಲಿ ನೋಡೋಣʼʼ ಎಂದು ಅಶ್ವತ್ಥನಾರಾಯಣ ಅವರಿಗೆ ಸವಾಲು ಹಾಕಿದರು.
ಇದನ್ನೂ ಓದಿ : Rotten Eggs : ಅಂಗನವಾಡಿಯಲ್ಲಿ ಮಕ್ಕಳು, ಮಹಿಳೆಯರಿಗೆ ಕೊಳೆತ ಮೊಟ್ಟೆ ಪೂರೈಕೆ; ಸರ್ಕಾರಕ್ಕೆ ಕಳಪೆ ಕಳಂಕ