ಬೆಂಗಳೂರು: ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಂದ ರಾಜ್ಯದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್‌ನ ಟಿ.ಎ ಶರವಣ ಅವರ ಆರೋಪಕ್ಕೆ ಸಚಿವ ಹಾಲಪ್ಪ ಆಚಾರ್ ನಡುವೆ ವಿಧಾನ ಪರಿಷತ್‌ನಲ್ಲಿ (Assembly Session) ಜಟಾಪಟಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಸಚಿವ ಹಾಲಪ್ಪ ಆಚಾರ್ ಅವರಿಗೆ ಶರವಣ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಯಾವ ಸಂಘ ಸಂಸ್ಥೆಗಳ ಮೂಲಕ ಪೂರೈಸಲಾಗುತ್ತದೆ? ಹಾಗೆಯೇ ಆ ಸಂಸ್ಥೆಗಳನ್ನು ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುತ್ತದೆ? ಆಹಾರ ಪೂರೈಕೆಗೆ ಇಲಾಖೆಯಿಂದ ವಾರ್ಷಿಕವಾಗಿ ಎಷ್ಟು ಖರ್ಚು ಮಾಡಲಾಗುತ್ತಿದೆ? ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳು ಅಂಗನವಾಡಿಗಳಿಗೆ ಆಹಾರ ಪೂರೈಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಅದೇ ಸಂಘ-ಸಂಸ್ಥೆಗಳಿಗೆ ಪೌಷ್ಟಿಕ ಆಹಾರ ಪೂರೈಕೆಗೆ ಅವಕಾಶ ನೀಡಲು ಕಾರಣಗಳೇನು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Budget 2023 : ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಧನ; ಇದಕ್ಕಾಗಿ 40 ಕೋಟಿ ರೂ. ಅನುದಾನ
ಇದಕ್ಕೆ ಉತ್ತರಿಸಿದ ಸಚಿವ ಹಾಲಪ್ಪ ಆಚಾರ್, ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಂದ ಆಹಾರ ಪದಾರ್ಥ ಪಡೆಯುತ್ತಿಲ್ಲ ಎಂದರು. ಇದಕ್ಕೆ ಆಕ್ರೋಶಗೊಂದ ಶರವಣ, ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಹಲವಾರು ಅರ್ಹತೆ ಪಡೆದ ಮಹಿಳಾ ಮತ್ತು ಸ್ವಸಹಾಯ ಸಂಘ ಸಂಸ್ಥೆಗಳಿದ್ದರೂ ಸಹ ಕೇವಲ ಕೆಲವೇ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂದು ವಾದಿಸಿದರು. ಇದರಿಂದಾಗಿ ಸಚಿವ ಮತ್ತು ಶರವಣ ನಡುವೆ ಕೆಲಕಾಲ ಜಟಾಪಟಿ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶರವಣ ಅವರಿಗೆ ಈ ಕುರಿತ ಸೂಕ್ತ ದಾಖಲೆಗಳನ್ನು ಒದಗಿಸಿ ಹಾಗೂ ಶರವಣ ಅವರು ನೀಡುವ ದಾಖಲೆಗಳನ್ನು ಪಡೆದು ಪರಿಶೀಲಿಸಿ ಎಂದು ತಿಳಿಸಿದರು.