ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ (Bangalore Airport) ತಪಾಸಣಾ ಅಧಿಕಾರಿಗಳು ನಾನಾ ಬಗೆಯ, ಚಿತ್ರ ವಿಚಿತ್ರ ಜನರನ್ನು ಸಂಭಾಳಿಸಬೇಕಾಗಿದೆ. ಚಿನ್ನವನ್ನು ನಾನಾ ರೂಪದಲ್ಲಿ ತರುವವರು, ಸುಮ್ಮ ಸುಮ್ಮನೆ ಕರೆ ಮಾಡಿ ಬಾಂಬ್ ಇದೆ ಎಂದು ಬೆದರಿಸುವವರು, ತಪಾಸಣೆ ವೇಳೆ ಬಾಂಬ್ ಇದೆ (Bomb threat) ಎಂದು ಹೇಳಿ ಬೆಚ್ಚಿ ಬೀಳಿಸುವವರು ಹೀಗೆ.. ಹಲವು ಬಗೆಯ ಕ್ರಿಮಿನಲ್‌ಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗಿದೆ. ಈ ಬಾರಿ ಇನ್ನೂ ಒಬ್ಬ ವಿಚಿತ್ರ ವ್ಯಕ್ತಿ ಬಂದಿದ್ದಾನೆ. ಆತ ತಾನೊಬ್ಬ ಟೆರರಿಸ್ಟ್ (I am a terrorist) ಎಂದು ಹೇಳಿಕೊಂಡಿದ್ದಾನೆ!
ಹೀಗೆ ತಾನೊಬ್ಬ ಟೆರರಿಸ್ಟ್ ಎಂದು ಘೋಷಣೆ ಮಾಡಿಕೊಂಡೇ ಬಂದವನ ಹೆಸರು ಆದರ್ಶ್ ಕುಮಾರ್ ಸಿಂಗ್. ಆತ ಫೆಬ್ರವರಿ 17ರಂದು ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹತ್ತಲು ಬಂದಿದ್ದ. ಸಿಐಎಸ್‌ಎಫ್ ಸಿಬ್ಬಂದಿ ಆತನ ತಪಾಸಣೆ ಮಾಡಿ ಟಿಕೆಟ್ ಎಲ್ಲಿ ಎಂದು ಕೇಳಿದಾಗ ಅವನ ಬಳಿ ಟಿಕೆಟ್ ಇರಲಿಲ್ಲ. ಆಗ ಆತ ನಾನೊಬ್ಬ ಟೆರರಿಸ್ಟ್ ಎಂದು ಹೇಳಿದ.
ಆತ ಹೇಳಿದ್ದು ಸುಳ್ಳು ಎನ್ನುವುದು ಸಿಐಎಸ್‌ಎಫ್ ಸಿಬ್ಬಂದಿಗೆ ಗೊತ್ತಾಯಿತು. ಯಾಕೆಂದರೆ, ಟೆರರಿಸ್ಟ್‌ಗಳು ಯಾರೂ ತಾವು ಟೆರರಿಸ್ಟ್‌ಗಳು ಎಂದು ಹೇಳುವುದಿಲ್ಲ! ಆದರೆ, ಹೀಗೆ ಹೇಳಿದವನನ್ನು ಸುಮ್ಮನೆ ಬಿಡುವುದುಂಟೇ?
ಏರ್ ಇಂಡಿಯಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಆದರ್ಶ್ ಕುಮಾರ್ ಸಿಂಗ್‌ನನ್ನು ಹಿಡಿದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ದೂರು ನೀಡಿದರು. ಸದ್ಯ ಏರ್ಪೊರ್ಟ್ ಠಾಣೆ ಪೊಲೀಸರು ಆದರ್ಶ್ ಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಸಿಕ್ಕಿಬಿದ್ದಿದ್ದ ಸಜ್ಜು ಕುಮಾರ್
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಜ್ಜುಕುಮಾರ್ ಎಂಬಾತ ತಪಾಸಣೆಯ ವೇಳೆ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಜೋಕ್ ಮಾಡಲು ಹೊರಟಿದ್ದ. ಆದರೆ ಅವನ ಜೋಕ್‌ಗೆ ಯಾರೂ ನಗಲಿಲ್ಲ. ಬದಲಿಗೆ ಬಂಧಿಸಿದರು.
ಆಗಿದ್ದೇನು ಅಂದರೆ ಅವನು ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ತೆರಳುತ್ತಿದ್ದ. ವಿಮಾನ ನಿಲ್ದಾಣದ ತಪಾಸಣೆ ಅಧಿಕಾರಿಗಳು ಆತನನ್ನು ಒಳಗೆ ಬಿಡುವ ಮುಂಚೆ ಚೆಕ್ಕಿಂಗ್ ನಡೆಸಲು ಮುಂದಾದರು. ಆಗ ಆತ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ತಮಾಷೆ ಮಾಡಿದ್ದ. ಮುಂದೆ ಅವನಿಗೆ ಎದುರಾದದ್ದು ಬಿಗಿಯಾದ ತಪಾಸಣೆ. ಆತ ತಾನು ತಮಾಷೆಗೆ ಹೇಳಿದ್ದು ಎಂದು ಹೇಳಿದರೂ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ.!
ಈ ರೀತಿ ಸಿಕ್ಕಾಕಿಕೊಂಡ ಪ್ರಯಾಣಿಕನ ಹೆಸರು ಸಜ್ಜು ಕುಮಾರ್. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತ ತನ್ನ ಊರಾದ ಕೇರಳಕ್ಕೆ ಹೋಗುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸುವಾಗ ಮಾಡುವ ತಪಾಸಣೆಯಿಂದ ಆತ ಕಿರಿಕಿರಿ ಅನುಭವಿಸಿದ್ದ. ಏನಿದೆ ಬ್ಯಾಗ್‌ನಲ್ಲಿ ಎಂದು ತಪಾಸಣೆ ಮಾಡುವ ಅಧಿಕಾರಿಗಳು ಕೇಳಿದ್ದರು. ಆಗ ಇವನು ತಮಾಷೆಗೆ ʻಬಾಂಬ್ ಇದೆʼ ಎಂದಿದ್ದ.
ಬಾಂಬ್ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅಲರ್ಟ್ ಆದ ಅಧಿಕಾರಿಗಳು ಕೂಡಲೇ ಆತನ ಬ್ಯಾಗ್ ಮತ್ತು ಆತನನ್ನು ಒಳಗೆ ಕರೆದುಕೊಂಡು ಹೋದರು. ತೀವ್ರ ತಪಾಸಣೆ ಮಾಡಿದ ವೇಳೆ ಬ್ಯಾಗ್‌ನಲ್ಲಿ ಬೇರೆ ಏನೂ ಪತ್ತೆಯಾಗಿರಲಿಲ್ಲ. ಅಧಿಕಾರಿಗಳ ಜತೆ ಉದ್ಧಟತನದಿಂದ ವರ್ತಿಸಿ, ತಪ್ಪು ಹಾದಿಗೆ ಎಳೆದ ಸಜ್ಜು ಕುಮಾರ್‌ನನ್ನು ಬಂಧಿಸಲಾಯಿತು.
ಇದನ್ನೂ ಓದಿ : Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ
Bangalore Airport: ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ; ಬಂಧನ
ದೇವನಹಳ್ಳಿ: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂದು ಪ್ರಯಾಣಿಕನೊಬ್ಬ ಏರ್‌ಪೋರ್ಟ್ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿ, ಜೈಲುಪಾಲಾಗಿರುವುದು ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶ್ರೇಯಸ್ ಚಾರ್ಮಿಯಾ ಬಂಧಿತ ಆರೋಪಿ. ಈತನ ಪರ್ಸ್ ಹುಡುಕಲು ಸಿಬ್ಬಂದಿ ಸಹಕರಿಸಲಿಲ್ಲ ಎಂದು ಕೋಪಗೊಂಡು ವಿಮಾನಯಾನ ಕಂಪನಿಯ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ನಂತರ SG 8536 ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.