Site icon Vistara News

Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್‌ ಬಂದ್‌ ಬಿಸಿ, ಬೇಕಿತ್ತಾ ಎರಡೆರಡು ಬಂದ್‌?

Bangalore Bandh Vatal Kuruburu

ಬೆಂಗಳೂರು: ಕಾವೇರಿ ನೀರಿನ (Cauvery water Dispute) ಹೆಸರಿನಲ್ಲಿ ನಾಯಕರು ತಮ್ಮ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಬಂದ್‌ ಘೋಷಣೆ ಮಾಡಿರುವುದರಿಂದ ಬೆಂಗಳೂರಿನ ಜನರು (Bangalore Bandh) ಈಗ ಎರಡೆರಡು ದಿನ ತಮ್ಮ ವ್ಯಾಪಾರ ವಹಿವಾಟು, ಓಡಾಟ, ಶಾಲೆ-ಕಾಲೇಜು, ಕಚೇರಿಗಳ ವಿಷಯದಲ್ಲಿ ಆತಂಕದ ಸ್ಥಿತಿಯನ್ನು ಎದುರಿಸಬೇಕಾಗಿದೆ. ಕಾವೇರಿ ನೀರು, ನೆಲ-ಜಲದ ವಿಷಯವಾಗಿರುವುದರಿಂದ ಎಲ್ಲರೂ ಬೆಂಬಲ ಕೊಡುತ್ತಾರೆ ಎಂಬ ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಂಡ ನಾಯಕರು ಅದೇ ಜನರಿಗೆ ತಾವೇ ಬಿಸಿ ಮುಟ್ಟಿಸಲು ಹೊರಟಿದ್ದಾರೆ. ಬಂದ್‌ಗಳಿಂದ ಪರಿಸ್ಥಿತಿಯಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ಅರಿವು ಎಲ್ಲರಿಗೆ ಇದ್ದರೂ ನೀರಿನ ವಿಚಾರದಲ್ಲಿ ಜನ ಒಗ್ಗಟ್ಟಾಗಿದ್ದಾರೆ ಎಂಬ ಸಂದೇಶ ರವಾನಿಸಲು ಎಲ್ಲರೂ ಬೆಂಬಲ ನೀಡಿದ್ದರು. ಸರ್ಕಾರ ಕೂಡಾ ಇದಕ್ಕೆ ಪರೋಕ್ಷ ಬೆಂಬಲವನ್ನು ನೀಡಿದಂತಿತ್ತು.

ಆದರೆ, ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡ ನಾಯಕರು ಎರಡೆರಡು ದಿನ ಬಂದ್‌ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ರೈತ ಮುಖಂಡ ಕುರುಬೂರು ಶಾಂತ ಕುಮಾರ್‌ (Kuruburu Shantha kumar) ಮತ್ತು ಆಪ್‌ ಮುಖಂಡ ಮುಖ್ಯಮಂತ್ರಿ ಚಂದ್ರು (Mukhyamantri Chandru) ಅವರದ್ದು ಸೆಪ್ಟೆಂಬರ್‌ 26ರ ಬೆಂಗಳೂರು ಬಂದ್‌ (Sep 26 Bangalore Bandh) ಆದರೆ, ಕನ್ನಡ ಚಳುವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ (Vatal Nagaraj) ಅವರದ್ದು ಸೆಪ್ಟೆಂಬರ್‌ 29ರ ಅಖಿಲ ಕರ್ನಾಟಕ ಬಂದ್‌ (Sep 29 Karnataka Bandh).

ಇಬ್ಬರೂ ಜತೆಯಾಗಿ ಕುಳಿತು ಒಂದು ದಿನಾಂಕವನ್ನು ನಿರ್ಧರಿಸುವ ಬದಲು ನಾ ಮೊದಲು ತಾ ಮೊದಲು ಎಂಬ ಜಿದ್ದಿಗೆ ಬಿದ್ದ ಫಲವೇ ಡಬಲ್‌ ಬಂದ್‌. ವಾಟಾಳ್‌ ನಾಗರಾಜ್‌ ಅವರಿಗಿಂತ ನಾವೇ ಮೊದಲು ಬಂದ್‌ಗೆ ಕರೆ ಕೊಡಬೇಕು ಎನ್ನುವ ಜಿದ್ದಿನಿಂದ ಕುರುಬೂರು ಶಾಂತ ಕುಮಾರ್‌ ಟೀಮ್‌ ತರಾತುರಿಯಲ್ಲಿ ಸಭೆ ನಡೆಸಿ ಸೆ. 26ರ ದಿನಾಂಕವನ್ನು ಘೋಷಿಸಿದೆ. ಈ ವಿಚಾರದಲ್ಲಿ ತಮ್ಮ ಜತೆ ಚರ್ಚೆ ಮಾಡಿಲ್ಲ ಎಂಬ ಸಿಟ್ಟಿನಲ್ಲಿದ್ದ ವಾಟಾಳ್‌ ನಾಗರಾಜ್‌ ಅಂದೇ ಪ್ರತ್ಯೇಕ ಕರ್ನಾಟಕ ಬಂದ್‌ನ ಸೂಚನೆಯನ್ನು ನೀಡಿದ್ದರು.

ಕಾವೇರಿ, ಕನ್ನಡದ ವಿಚಾರ ಅಂದರೆ ಬಂದ್‌ ಕರೆ ಕೊಡಲು ಅಧಿಕೃತ ಅರ್ಹತೆ ಇರುವುದು ತಮಗೆ ಎಂದು ತಿಳಿದುಕೊಂಡಿರುವ ವಾಟಾಳ್‌ ನಾಗರಾಜ್‌, ಬಂದ್‌ಗೆ ಕರೆ ಕೊಡಬೇಕಾದವನು ನಾನು, ಬೇರೆಯರಿವರಿಗೆ ಯಾರು ಅಧಿಕಾರ ಕೊಟ್ಟರು ಎಂದು ನೇರವಾಗಿಯೇ ಕೇಳಿದ್ದಾರೆ. ಅಲ್ಲಿಗೆ ನಾಯಕರ ಜಿದ್ದೇ ಈ ಡಬಲ್‌ ಬಂದ್‌ಗೆ ಕಾರಣ ಎನ್ನುವುದು ಸ್ಪಷ್ಟವಾಗಿದೆ.

ಬೆಂಗಳೂರು ಬೇರೆನಾ? ಕರ್ನಾಟಕದಲ್ಲಿಲ್ವಾ?

ವಾಟಾಳ್‌ ನಾಗರಾಜ್‌ ಕೂಡಾ ಬಂದ್‌ಗೆ ಕರೆ ನೀಡುತ್ತಿದ್ದಂತೆಯೇ ಸೆ. 26ರ ಬಂದ್‌ಗೆ ಬೆಂಬಲ ನೀಡಿದ್ದ ಸಂಘಟನೆಗಳಲ್ಲಿ ಗೊಂದಲ ನಿರ್ಮಾಣವಾಗಿದೆ. ಈಗಾಗಲೆ ಹಲವಾರು ಸಂಘಟನೆಗಳು ತಾವು ಸೆ. 26ರ ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದು ಸೆ. 29ರ ಬಂದ್‌ಗೆ ಬೆಂಬಲ ವ್ಯಕ್ತಪಪಡಿಸಿವೆ.

ಬೆಂಗಳೂರು-ಮತ್ತು ಕರ್ನಾಟಕ ಬಂದ್‌ ಒಂದೇ ದಿನ ನಡೆಯಲಿ ಎಂದು ಜನರು ಆಶಿಸಿದರೆ ಸಂಘಟಕರು ತಮ್ಮದೇ ಪ್ರತ್ಯೇಕ ಎಂಬ ಅಹಂಗೆ ಬಿದ್ದಿದ್ದಾರೆ. ಒಂದು ಹಂತದಲ್ಲಿ ಬೆಂಗಳೂರು ಬಂದ್‌ ಹಿಂದೆಗೆದುಕೊಳ್ಳಬಹುದಾ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಕುರುಬೂರು ಮತ್ತು ಮುಖ್ಯಮಂತ್ರಿ ಚಂದ್ರು ತಮ್ಮ ಹಠಕ್ಕೆ ಬದ್ಧರಾಗಿದ್ದರಿಂದ ಎರಡೂ ಬಂದ್‌ಗಳು ನಡೆಯುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರು ಕರ್ನಾಟಕದಲ್ಲೇ ಇರುವುದರಿಂದ ಒಂದೇ ಬಂದ್‌ ಸಾಕಾಗಿತ್ತು ಎಂಬ ವಾದವನ್ನು ಕೇಳುವ ಮನಸ್ಥಿತಿಯಲ್ಲಿ ಇಬ್ಬರೂ ಇಲ್ಲ.

ʻʻನಾವು ತುರ್ತಾಗಿ ಬಂದ್ ಗೆ ತೀರ್ಮಾನ ಮಾಡಿದ್ದು, ತುರ್ತಾಗಿ ನೀರು‌ ನಿಲ್ಲಿಸಲು. ನೀರು ಖಾಲಿ ಆಗುತ್ತೆ ಅಂತ ನಾವು ಬಂದ್ ಗೆ ಮುಂದಾಗಿದ್ದೇವೆ/ ಇದರಲ್ಲಿ ಯಾವುದೇ ರಾಜಕೀಯವಿಲ್ಲʼʼ ಎಂದು ಆಪ್‌ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರೆ, ಕೆಲವು ಸಂಘಟನೆಗಳು ತಾವು ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್‌ ಅವರು, ಜನಶಕ್ತಿ ಹೆಚ್ಚಾದಾಗ ಸರ್ಕಾರ ಹತ್ತಿಕ್ಕಲು ಮುಂದಾಗುತ್ತದೆ. ನಾವು ಇಲ್ಲಿ ಯಾವುದೇ ಅಪರಾಧ ಮಾಡ್ತಿಲ್ಲ. ನಾವು ಯಾವುದಕ್ಕೂ ಹೆದರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangalore bandh : ಸೆ. 29ಕ್ಕೆ ಅಖಿಲ ಕರ್ನಾಟಕ ಬಂದ್‌ ಘೋಷಿಸಿದ ವಾಟಾಳ್‌, ದಿಕ್ಕು ತಪ್ಪಿದ ಸೆ. 26ರ ಬೆಂಗಳೂರು ಬಂದ್‌

ಈಗಾಗಲೇ ಶಾಲೆಗಳಿಗೆ ರಜೆ, ಸಂಘಟನೆಗಳಿಗೆ ಗೊಂದಲ

ಸೆ. 26ರಂದು ಬೆಂಗಳೂರು ನಡೆಯಲಿದೆ ಎಂಬ ಕಾರಣದಿಂದ ಮಕ್ಕಳಿಗೆ ತೊಂದರೆಯಾಗದಿರಲಿ ಎಂದು ಬಹುತೇಕ ಶಾಲೆ, ಕಾಲೇಜುಗಳು ರಜೆ ಘೋಷಣೆ ಮಾಡಿವೆ. ಕೆಲವರು ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡುವ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ಬಂದ್‌ ಹಿಂದೆಗೆದುಕೊಳ್ಳುವ ಸ್ಥಿತಿಯಲ್ಲಿ ಜಲಸಂರಕ್ಷಣಾ ಸಮಿತಿಯೂ ಇಲ್ಲ.

ಈ ನಡುವೆ ಬಂದನ್ನು ಬೆಂಬಲಿಸುವ ಸಂಘಟನೆಗಳಿಗೆ ಗೊಂದಲ ಬಹುವಾಗಿ ಕಾಡಿವೆ. ಒಂದೇ ಬಂದ್‌ ಎಂಬ ಕಾರಣಕ್ಕಾಗಿ ಅತ್ಯುತ್ಸಾಹದಿಂದ ಸೆ. 26ರ ಬಂದ್‌ಗೆ ಬೆಂಬಲ ಘೋಷಿಸಿದ್ದ ಸಂಘಟನೆಗಳು ಈಗ ಮರು ಚಿಂತನೆಯನ್ನು ನಡೆಸುತ್ತಿವೆ. ಯಾವ ಸಂಘಟನೆಯೂ ಎರಡೆರಡು ದಿನ ಬಂದ್‌ ಮಾಡಲು ರೆಡಿ ಇಲ್ಲ. ಹಾಗಂತ ಯಾವ ಬಂದ್‌ ಹೆಚ್ಚು ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಿಕೊಂಡು ತೀರ್ಮಾನ ಕೈಗೊಳ್ಳಲು ಮುಂದಾಗಿವೆ.

ಈಗಾಗಲೇ ಓಲಾ ಊಬರ್‌ ಚಾಲಕರ ಸಂಘಟನೆ, ಆದರ್ಶ ಆಟೋ ಸಂಘಟನೆ, ಹೋಟೆಲ್‌ ಮಾಲೀಕರ ಸಂಘಟನೆ ತಮ್ಮ ಬೆಂಬಲ ಸೆ. 26ರ ಬಂದ್‌ಗಲ್ಲ, ಸೆ. 29ರ ಬಂದ್‌ಗೆ ಎಂದು ಹೇಳಿವೆ. ರಾತ್ರಿಯ ಹೊತ್ತಿಗೆ ಇನ್ನಷ್ಟು ಸಂಘಟನೆಗಳು ಹಿಂದೆ ಸರಿಯುವ ಸಾಧ್ಯತೆ ಕಾಣಿಸುತ್ತಿದೆ. ಇತ್ತ ಭಾರತೀಯ ಜನತಾ ಪಕ್ಷ ಈಗಾಗಲೇ ಸೆ. 26ರ ಬಂದ್‌ಗೆ ಬೆಂಬಲ ಘೋಷಿಸಿದ್ದು, ಸೆ. 29ರ ಬಂದನ್ನೂ ಬೆಂಬಲಿಸುವ ಅನಿವಾರ್ಯತೆಗೆ ಸಿಲುಕಿದೆ.

ವಾಟಾಳ್‌ ನಾಗರಾಜ್‌ ಅವರು ತಮ್ಮ ಜತೆ ಸಾವಿರಾರು ಸಂಘಟನೆಗಳಿವೆ ಎಂದು ಪಟ್ಟಿ ನೀಡಿದ್ದಾರೆ. ಅವರು ಮಂಗಳವಾರ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಕಡಿಮೆ ಇದೆ. ಸೆ. 29ರ ಬಂದ್‌ಗೂ ಇದೇ ರೀತಿಯ ಆಯ್ದ ಬೆಂಬಲ ದೊರೆಯಲಿದೆ. ಅಂತೂ ಕಾವೇರಿ ಹೆಸರಿನಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಂದಾಗಿರುವ ನಾಯಕರಿಗೆ ಪಾಠ ಹೇಳಬೇಕಾಗಿದೆ. ಬಂದ್‌ನ ಹೆಸರಿನಲ್ಲಿ ಹಿಂಸಾಚಾರ, ಬೆದರಿಕೆ ಹಾಕಿದರೆ ಕಠಿಣ ಕಾನೂನು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ.

Exit mobile version