Site icon Vistara News

Bangalore Bandh : ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್‌ ಪೊಲೀಸ್‌ ವಶಕ್ಕೆ

bangalore Bandh kuruburu deatained

ಬೆಂಗಳೂರು: ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಬೇಕು (Cauvery water Dispute) ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವ ಜಲ ಸಂರಕ್ಷಣಾ ಸಮಿತಿಯ ಮುಖ್ಯಸ್ಥರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತ ಕುಮಾರ್‌ (Kuruburu Shantha kumar) ಅವರನ್ನು ಪೊಲೀಸರು ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ (Kuruburu Shantha kumar Detained)

ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ (Mysore Bank Circle) ಜಮಾವಣೆಗೊಂದು ಪ್ರತಿಭಟನೆ ನಡೆಸಿ ಅಲ್ಲಿಂದ ಟೌನ್‌ ಹಾಲ್‌ ಕಡೆಗೆ ಹೋಗುವ ಪ್ಲ್ಯಾನ್‌ ಹೊಂದಿದ್ದ ಕುರುಬೂರು ಶಾಂತ ಕುಮಾರ್‌ ಅವರನ್ನು ಸರ್ಕಲ್‌ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್‌ 144 ಅಡಿ ಜಾರಿ ಮಾಡಿರುವ ನಿಷೇಧಾಜ್ಞೆ ನಿಯಮದಡಿ ಅವರನ್ನು ಬಂಧಿಸಿದ್ದಾರೆ. ಆದರೆ, ಇದೊಂದು ಗೂಂಡಾಗಿರಿ ಎಂದು ಶಾಂತ ಕುಮಾರ್‌ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿದ್ದಾರೆ. ಶಾಂತಕುಮಾರ್‌ ಅವರ ಜತೆ ಇನ್ನೂ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಸೆಕ್ಷನ್‌ ಹಾಕಿದ್ದಕ್ಕೆ ಕುರುಬೂರು ಆಕ್ಷೇಪ

ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತ ಕುಮಾರ್‌, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಮೊದಲಾದ ರಾಜ್ಯದ ಅಸ್ಮಿತೆಯ ವಿಚಾರ ಬಂದಾಗ ಪೊಲೀಸರು ಪ್ರತಿಭಟನಾಕಾರರಿಗೆ ಬೆಂಬಲ ಕೊಡುತ್ತಾರೆ. ಆದರೆ, ಇಲ್ಲಿ ದಮನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಪೊಲೀಸರು ಪ್ರತಿಭಟನಾಕಾರರಿಗೆ ತೊಂದರೆ ಕೊಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹೇಳಿದ ಅವರು, ಕುಡಿಯುವ ನೀರಿಲ್ಲ ಅಂದ್ರೆ ಮನೆಗೆ ಹೋದಾಗ ಏನು ಹೇಳ್ತೀರಾ ಎಂದು ಪೊಲೀಸರನ್ನೇ ಪ್ರಶ್ನಿಸಿದರು.

ʻʻಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. ನಮ್ಮ ಹೋರಾಟ, ಚಳುವಳಿ ಮುಂದುವರಿಯಲಿದೆʼʼ ಎಂದು ಕುರುಬೂರು ಇದೇ ಸಂದರ್ಭದಲ್ಲಿ ಹೇಳಿದರು.

ʻʻರಾಜ್ಯದ ರೈತರು ಗಮನಿಸುತ್ತಿದ್ದಾರೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಹೀಗಾಗಿ ಪೋಲಿಸರು ಎಚ್ಚರಿಕೆಯಿಂದ ಇರಬೇಕುʼʼ ಎಂದು ಕುರುಬೂರು ಎಚ್ಚರಿಸಿದರು.

ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ

ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಸೇರಿದ್ದ ರೈತರನ್ನೂ ಪೊಲೀಸರು ಚದುರಿಸಿದರು. ಈ ವೇಳೆ ಪ್ರತಿಭನಾಕಾರರು ಪೋಲೀಸರ ಗೂಂಡಾಗಿರಿಗೆ ಧಿಕ್ಕಾರ ಎಂದು ಕೂಗಿದರು.

ಮೈಸೂರು ಬ್ಯಾಂಕ್‌ ಸರ್ಕಲ್‌ನಿಂದ ಪ್ರತಿಭಟನಾಕಾರರನ್ನು ಟೌನ್ ಗೆ ಹೋಗದಂತೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಭಾರಿ ವಾಗ್ವಾದ ನಡೆಯಿತು. ಸರ್ಕಾರ 144ನೇ ಸೆಕ್ಷನ್‌ ಹಾಕಿ ದಬ್ಬಾಳಿಕೆ ಮಾಡ್ತಿದೆ. ಕಾನೂನಿಗೆ ನಾವು ಗೌರವ ಕೊಡ್ತಿವಿ ಎಂದು ಹೇಳಿದರು.

ʻʻನೀವೂ ಹೋರಾಟ ಮಾಡಬೇಕಿತ್ತು. ಕಾವೇರಿ ನದಿ ನೀರು ನಿಮಗೆ ಬೇಡ್ವಾ..? ಪೊಲೀಸನವರು ರಜಾ ಹಾಕಿ ಭಾಗವಹಿಸಬೇಕು. ನಾವು ಯಾವುದೇ ತೊಂದರೆ ಮಾಡಲ್ಲʼʼ ಎಂದು ಪೊಲೀಸರಿಗೇ ಪ್ರತಿಭಟನಾಕಾರರು ಬುದ್ಧಿ ಹೇಳಿದರು.

ಹೇಗಿದೆ ಬೆಂಗಳೂರು ಬಂದ್‌?

ಬೆಂಗಳೂರು ಬಂದ್‌ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬೆಂಗಳೂರಿನ ಪ್ರಮುಖ ಭಾಗಗಳಾದ ಮೆಜೆಸ್ಟಿಕ್‌ನಲ್ಲಿ ಜನ ಸಂಚಾರ ಕಡಿಮೆ ಇತ್ತು. ಬಿಎಂಟಿಸಿ ಬಸ್‌ಗಳು ಹೊರಟಿವೆಯಾದರೂ ಜನ ಸಂಚಾರ ಕಡಿಮೆ ಇತ್ತು. ಮೆಟ್ರೋ ಸಂಚಾರ ಎಂದಿನಂತೆ ಇದ್ದು, ಜನರೂ ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ ಬಿಕೋ ಎನ್ನುತ್ತಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಬಂದ್‌ ಹೆಚ್ಚು ಪರಿಣಾಮ ಬೀರಿಲ್ಲ. ಜನ ಜೀವನ ಎಂದಿನಂತೆಯೇ ಇದೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಮಕ್ಕಳಿಗೆ ಏನೂ ಸಮಸ್ಯೆ ಆಗಿಲ್ಲ.

Exit mobile version