Site icon Vistara News

Bangalore Bandh : ಪ್ರತಿಭಟನಾಕಾರರ ಬಂಧನಕ್ಕೆ ಎಚ್‌ಡಿಕೆ ಕೆಂಡಾಮಂಡಲ; ಇದು ಸ್ಟಾಲಿನ್‌ನ ಬಾಡಿಗೆ ಸರ್ಕಾರವೇ?

HD Kumaraswamy Bandh

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery Water Dispute) ಬೆಂಗಳೂರು ಬಂದ್‌ಗೆ (Bangalore Bandh) ಕರೆ ನೀಡಿದವರು ಮತ್ತು ಬೆಂಬಲ ನೀಡಿದ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸುತ್ತಿರುವ (Protesters and Leaders deatained) ಸರ್ಕಾರದ ಕ್ರಮದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಕೆಂಡಾಮಂಡಲರಾಗಿದ್ದಾರೆ.

ಮೇಕೆದಾಟು ಪಾದಯಾತ್ರೆ ಮಾಡಿದವರು ಈಗ ಕಾವೇರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಕಿಡಿಗೇಡಿತನದ ಪರಮಾವಧಿ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇದು ಕನ್ನಡಿಗರ ಸರ್ಕಾರವೋ, ಸ್ಟಾಲಿನ್‌ನ ಬಾಡಿಗೆ ಸರ್ಕಾರವೋ? ಕಾಂಗ್ರೆಸ್‌ ಡಿಎಂಕೆಯ ಬಿ ಟೀಮಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು_ಬಂದ್‌ ಕಾವೇರಿ_ನಮ್ಮದು ಎಂಬ ಹ್ಯಾಷ್‌ ಟ್ಯಾಗ್‌ನಲ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಒಂದು ನ್ಯಾಯವೇ

ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕರ್ನಾಟಕದ ಕಾಂಗ್ರೆಸ್ ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ?- ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ಮಾಡಬಾರದೇ?

ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ?

ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್‌ ಬಂದ್‌ ಬಿಸಿ, ಬೇಕಿತ್ತಾ ಎರಡೆರಡು ಬಂದ್‌?

ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಿ ಎಂದ ಎಚ್‌ಡಿಕೆ

ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Bangalore Bandh : ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್‌ ಪೊಲೀಸ್‌ ವಶಕ್ಕೆ

ರಾತ್ರೋರಾತ್ರಿ 150ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು ಬಂದ್‌ ಹಿನ್ನೆಲೆಯಲ್ಲಿ ಹಿಂದೆ ಬಂದ್‌ ವೇಳೆ ಗಲಾಟೆಗೆ ಕಾರಣರಾಗಿದ್ದ ಕೆಲವು ನಾಯಕರು ಮತ್ತು ರೌಡಿ ಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದರು.

ʻʻಹಳೆ ಪ್ರಕರಣಗಳಲ್ಲಿ ಇನ್ವಾಲ್ ಆಗಿದ್ದ ರೌಡಿಶೀಟರ್‌ಗಳನ್ನು ಕಸ್ಟಡಿಗೆ ತಗೊಂಡಿದ್ದೇವೆ. ನಿನ್ನೆ ರಾತ್ರಿನೇ ಹಳೆ ಕೇಸ್ ಗಳಲ್ಲಿ ಭಾಗಿಯಾಗಿದ್ದ 150 ಜನರನ್ನ ವಶಕ್ಕೆ ಪಡೆದಿದ್ದೇವೆ. ಅದು ಇವತ್ತು ತುಂಬಾನೇ ಹೆಲ್ಪ್ ಆಗಿದೆ. ಬೆಳಗ್ಗೆ 4 ಘಂಟೆಯಿಂದಲೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಒಂದಷ್ಟು ಲೀಡರ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಎಲ್ಲಾ ರೀತಿಯ ಭದ್ರತೆ ವಹಿಸಿದ್ದೇವೆʼʼ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿದ್ದಾರೆ.

ಜಲಸಂರಕ್ಷಣಾ ಸಮಿತಿಯ ಕುರುಬೂರು ಶಾಂತ ಕುಮಾರ್‌ ಸೇರಿದಂತೆ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಎಲ್ಲ ನಾಯಕರನ್ನು ಫ್ರೀಡಂ ಪಾರ್ಕ್‌ಗೆ ತಂದು ಬಿಡಲಾಗುತ್ತಿದ್ದು, ಅಲ್ಲಿಂದ ಹೊರಗೆ ಹೋಗಲು ಬಿಡುತ್ತಿಲ್ಲ.

Exit mobile version