Site icon Vistara News

Bangalore Bandh: ಬೆಂಗಳೂರು ಬಂದ್‌ ಹತ್ತಿಕ್ಕಲು ಪೊಲೀಸ್‌ ಬಲ ಪ್ರಯೋಗ ನಡೆಯಿತೇ? ಕಮಿಷನರ್‌ ಹೇಳಿದ್ದೇನು?

Protesters deatained

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ (Cauvery water Dispute) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ಕರೆ ನೀಡಿದ್ದ ಒಂದು ದಿನದ ಬೆಂಗಳೂರು ಬಂದ್‌ (Bangalore Bandh) ಸಾಂಗವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆದ ಪ್ರತಿಭಟನೆಯ ವೇಳೆ ಗಮನೀಯ ಅನಾಹುತಕಾರಿ ಘಟನೆಗಳು ಇಲ್ಲದೆ ಬಂದ್‌ ಬಹುತೇಕ ಶಾಂತಿಯುತವಾಗಿ ನಡೆಯಿತು.

ನೂರಾರು ಸಂಘಟನೆಗಳು ಸೇರಿ ನಡೆಸಿದ ಈ ಬಂದ್‌ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಬೆಂಬಲ ನೀಡಿವೆ. ಈ ನಡುವೆ, ಪ್ರತಿಭಟನೆಗೆ ನಮ್ಮ ಯಾವುದೇ ಆಕ್ಷೇಪ ಇಲ್ಲ ಎಂದು ಪದೇಪದೆ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಒಳಗಿಂದೊಳಗೆ ಪೊಲೀಸ್‌ ಬಲ ಪ್ರಯೋಗದ (Police Force used to curb bandh?) ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರೇ ಎಂಬ ಪ್ರಶ್ನೆ ಕೇಳಿಬಂದಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಬಂದ್‌ ಆರಂಭವಾಗುತ್ತಿದ್ದಂತೆಯೇ ಪೊಲೀಸ್‌ ಇಲಾಖೆ ಬಲಪ್ರಯೋಗದ ಮೂಲಕ ಬಂದ್‌ನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದರು. ನಾಯಕರನ್ನು ಬಂಧಿಸಿದ್ದು, ರಾತ್ರೋರಾತ್ರಿ ನಡೆದ ಮುನ್ನೆಚ್ಚರಿಕಾ ಕ್ರಮದ ಬಂಧನಗಳನ್ನು ಅವರು ಉಲ್ಲೇಖ ಮಾಡಿದ್ದರು.

ಇತ್ತ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಎಲ್ಲ ರೀತಿಯಿಂದಲೂ ಹತ್ತಿಕ್ಕುವ ಪ್ರಯತ್ನಗಳ ನಡುವೆ ಬಂದ್‌ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಅವರು ಕೂಡಾ ಪೊಲೀಸ್‌ ಬಲ ಪ್ರಯೋಗದ ಉಲ್ಲೇಖ ಮಾಡಿದ್ದಾರೆ.

ಸೆಕ್ಷನ್‌ ಜಾರಿಗೆ ಬಿಜೆಪಿ, ಜೆಡಿಎಸ್‌ ವಿರೋಧ

ಬಂದ್‌ನ ದಿನ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ. ಮಾಡುವುದಿದ್ದರೆ ಕೇವಲ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ. ಬೇರೆ ಎಲ್ಲೂ ಮೆರವಣಿಗೆ ಕೂಡಾ ಮಾಡುವಂತಿಲ್ಲ ಎಂದು ಪೊಲೀಸ್‌ ಕಮೀಷನರ್‌ ಬಿ. ದಯಾನಂದ್‌ ಹೇಳಿದ್ದರು. ಇದನ್ನು ಬಿಜೆಪಿ ಮತ್ತು ಜೆಡಿಎಸ್‌ ಆಕ್ಷೇಪಿಸಿವೆ. ಪೊಲೀಸ್‌ ಅಧಿಕಾರಿಗಳು ಸೆಕ್ಷನ್‌ 144ರ ಹೆಸರಿನಲ್ಲಿ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ನವರೆಗೆ ನಡೆಯುವ ಮೆರವಣಿಗೆಯನ್ನೂ ತಡೆಯುತ್ತಿದ್ದಾರೆ ಎಂದಿದ್ದಾರೆ.

ಎಲ್ಲೇ ಬಂಧನವಾದರೂ ಫ್ರೀಡಂ ಪಾರ್ಕ್‌ಗೆ

ಮಂಗಳವಾರ ಮುಂಜಾನೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಅಲ್ಲೆಲ್ಲ ಮೊದಲೇ ಹಾಜರಿದ್ದು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಫ್ರೀಡಂ ಪಾರ್ಕ್‌ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಬಂದ್‌ಗೆ ಕರೆ ನೀಡಿದ್ದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮುಖಂಡ, ರೈತ ನಾಯಕ ಕುರುಬೂರು ಶಾಂತ ಕುಮಾರ್‌ ಅವರನ್ನು ಅವರು ಮೈಸೂರು ಬ್ಯಾಂಕ್‌ ಸರ್ಕಲ್‌ಗೆ ಬರುತ್ತಲೇ ಬಂಧಿಸಲಾಯಿತು. ಅವರು ಟೌನ್‌ ಹಾಲ್‌ವರೆಗೆ ಮೆರವಣಿಗೆ ಹೋಗುತ್ತೇವೆ, ಒಂದು ಪ್ರತಿಭಟನೆ ಸಭೆ ನಡೆಸುತ್ತೇವೆ ಎಂದರೂ ಅವಕಾಶ ಸಿಕ್ಕಿಲ್ಲ. ಹೀಗೆ ಎಲ್ಲಾ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Bangalore Bandh : ಪ್ರತಿಭಟನಾಕಾರರ ಬಂಧನಕ್ಕೆ ಎಚ್‌ಡಿಕೆ ಕೆಂಡಾಮಂಡಲ; ಇದು ಸ್ಟಾಲಿನ್‌ನ ಬಾಡಿಗೆ ಸರ್ಕಾರವೇ?

1000ಕ್ಕೂ ಅಧಿಕ ಮಂದಿಯನ್ನು ಮೊದಲೇ ಕಸ್ಟಡಿಗೆ ಪಡೆಯಲಾಗಿತ್ತು!

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರೇ ಹೇಳಿದಂತೆ ಬೆಂಗಳೂರಿನಲ್ಲಿ ಬಂದ್‌ನ ಮುನ್ನಾ ದಿನವೇ ಮುನ್ನೆಚ್ಚರಿಕೆ ಕ್ರಮವಾಗಿ 1000ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ʻʻಬೆಳಗ್ಗೆಯಿಂದ ಶಾಂತಿಯುತವಾಗಿ ಬಂದ್ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಗರದಲ್ಲಿ ನಡೆದಿಲ್ಲ. ನಗರದಾದ್ಯಂತ ವ್ಯಾಪಕವಾದ ಬಂದೋಬಸ್ತ್ ಮಾಡಲಾಗಿತ್ತು. ಮೊದಲೇ ಕೆಲವರನ್ನು ನಾವು ವಶಕ್ಕೆ ಪಡೆದಿದ್ದೆವು. ಇನ್ನು ಪ್ರತಿಭಟನೆಗೆ ಬಂದವರನ್ನು ವಶಕ್ಕೆ ಪಡೆದೆವುʼʼ ಎಂದು ಅವರು ಬಂದ್‌ ಬಳಿಕ ಹೇಳಿದರು.

ʻʻಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತವಾಗಿ ಬಂದ್ ಮಾಡಿದರು. ಯಾವುದೇ ಬಸ್ ಗಳಿಗೆ ಕಲ್ಲು ತೂರಾಟ ಆಗಿಲ್ಲ. ಜಯನಗರದಲ್ಲಿ ಕೆಲ ಘಟನೆಗಳು ಆಗಿವೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಾ ಇದ್ದಾರೆ. ತಮಿಳುನಾಡು ಬಸ್ ಗಳು ಅವರೇ ಸಂಚಾರ ನಿಲ್ಲಿಸಿದರುʼʼ ಎಂದು ವಿವರಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಕಸ್ಟಡಿಗೆ ಪಡೆದಿದ್ದೆವು. ಅವರನ್ನು ಬಿಡುಗಡೆ ಮಾಡಲಾಗಿದೆʼʼ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಬಂಧಿತರಲ್ಲಿ ಈ ಹಿಂದೆ ಬಂದ್‌ ಸಂದರ್ಭದಲ್ಲಿ ಗಲಾಟೆ ಮಾಡಿದ ಹಿನ್ನೆಲೆ ಇರುವವರು, ಸಂಘಟನೆಗಳು ಮುಖಂಡರು ಇದ್ದರು.

Exit mobile version