ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಸೆ. 26ರಂದು ನಡೆಯಲಿರುವ ಬೆಂಗಳೂರು ಬಂದ್ (Bangalore Bandh) ಮತ್ತು ಸೆ. 29ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗಳಲ್ಲಿ (Karnataka Bandh) ಯಾವುದಕ್ಕೂ ತಾನು ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಘೋಷಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ (TA Narayana Gowda) ಅವರು ಈ ಬಗ್ಗೆ ಆಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಆದರೆ ಯಾವುದೇ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಕುರುಬೂರು ಶಾಂತಕುಮಾರ್ ನೇತೃತ್ವದ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‌ಗೆ ಕರೆ ನೀಡಿದರೆ ಮತ್ತು ಸೆಪ್ಟೆಂಬರ್ 29ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಪ್ರತ್ಯೇಕವಾಗಿ ನಡೆಯಲಿರುವ ಈ ಯಾವ ಬಂದ್‌ಗೂ ನಮ್ಮ ಬೆಂಬಲವಿಲ್ಲ ಎಂದು ರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ. ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ರಾಜ್ಯಾದ್ಯಂತ ಮುಂದುವರೆಯುತ್ತದೆ ಎಂದು ಹೇಳಿದೆ.
ಸೋಮವಾರ ಬೆಳಗ್ಗೆ ಸಭೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಉನ್ನತಾಧಿಕಾರ ಸಮಿತಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಅದರ ಪ್ರಮುಖಾಂಶಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.
ಬಂದ್‌ಗೆ ರಕ್ಷಣಾ ವೇದಿಕೆ ಬೆಂಬಲ ಯಾಕಿಲ್ಲ?
- ಸೆಪ್ಟೆಂಬರ್ 26 ಮತ್ತು 29ರಂದು ಕರೆ ನೀಡಲಾಗಿರುವ ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ.
- ಆದರೆ ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದೆ.
- ಸೆಪ್ಟೆಂಬರ್ 26ರಂದು ಮಂಗಳವಾರ ವೇದಿಕೆಯ ಗಾಂಧಿನಗರ ಕಚೇರಿ ಆವರಣದಿಂದ ವೇದಿಕೆ ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.
- ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಯಾವುದೇ ಚಳವಳಿ ಕೈಗೆತ್ತಿಕೊಂಡರೂ ಜನಜಾಗೃತಿ ಮೂಡಿಸುವುದನ್ನು ಮೊದಲನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ.
- ದಿಢೀರನೆ ಬಂದ್ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ರಕ್ಷಣಾ ವೇದಿಕೆ ಒಪ್ಪುವುದಿಲ್ಲ. ಬಂದ್ ಹೋರಾಟದ ಕೊನೆಯ ಅಸ್ತ್ರವಾಗಿರಬೇಕು.
ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
ನಾವು ಯಾವುದೇ ಅಂಗಡಿ ಮುಂಗಟ್ಟು ಬಂದ್ ಮಾಡಿಸುವುದಿಲ್ಲ
ಎರಡೂ ದಿನಗಳ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿ, ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವುದಿಲ್ಲ. ಬಂದ್‌ಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕಾವೇರಿಗಾಗಿ ನಮ್ಮ ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳು ಮುಂದುವರೆಯುತ್ತವೆ ಎಂದು ಕರವೇ ಹೇಳಿದೆ.
ಇದೇ ವೇಳೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.