ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ (Jala Samrakshana Samiti) ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಆದರೆ, ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಸೆ. 29ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಈ ಹಿಂದೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
ರೈತ ಸಂಘದ ಕುರುಬೂರು ಶಾಂತ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರು ಬಂದ್ ನಡೆಯಲಿದೆ. ಬಂದ್‌ನಿಂದಾಗಿ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿಗಳು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ (Holiday announced for School and Colleges) ಘೋಷಿಸಿದ್ದಾರೆ. ಕಾಲೇಜುಗಳು ಮತ್ತು ವಿವಿಗಳು ನಿಗದಿ ಮಾಡಿದ್ದ ಪರೀಕ್ಷೆಗಳನ್ನು ಮುಂದೂಡಿವೆ (Exams Postponed).
ಈ ನಡುವೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಬಿಎಂಟಿಸಿ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ. ಯಾಕೆಂದರೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಬಂದ್‌ಗೆ ಬೆಂಬಲ ಘೋಷಿಸಿವೆ. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ
ಕನ್ನಡ ಮತ್ತು ನೀರಿಗೆ ಸಂಬಂಧಿಸಿದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕನ್ನಡ ರಕ್ಷಣಾ ವೇದಿಕೆ ಈ ಬಾರಿ ತಟಸ್ಥವಾಗಿ ಉಳಿದಿದೆ. ಸೆ. 26 ಅಥವಾ ಸೆ. 29 ಯಾವ ಬಂದ್‌ಗೂ ಬೆಂಬಲ ಕೊಡುವುದಿಲ್ಲ ಎಂದು ಅದು ಪ್ರಕಟಿಸಿದೆ. ಇದು ಬಂದ್ ಆಯೋಜಕರಿಗೆ ದೊಡ್ಡ ಹಿನ್ನಡೆಯಾಗಲಿದೆ.
ಹಲವು ಸಂಘಟನೆಗಳ ಬೆಂಬಲ ವಾಪಸ್
ಬೆಂಗಳೂರು ಬಂದ್, ಕರ್ನಾಟಕ ಬಂದ್ ಎರಡು ಬಂದ್ ಘೋಷಣೆಯಾಗಿದ್ದರಿಂದ ಕೆಲವು ಸಂಘಟನೆಗಳು ಸೆ. 26ರ ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
1. ಬೆಂಗಳೂರಿನ ಓಲಾ, ಊಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ತಾವು ಸೆ. 26ರ ಬದಲು ಸೆ. 29ರ ಬಂದ್ ಬೆಂಬಲಿಸುವುದಾಗಿ ಹೇಳಿದೆ.
2. ಬೆಂಗಳೂರಿನ ಆದರ್ಶ ಆಟೋ ಚಾಲಕರ ಯೂನಿಯನ್ ಕೂಡಾ ಸೆ. 26ರ ಬದಲು ಸೆ. 29ಕ್ಕೆ ಶಿಫ್ಟ್ ಆಗಿದೆ.
3. ಈ ಹಿಂದೆ ಸೆ. 26ರ ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ಈಗ ಸೆ. 29ರ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಇರುವುದಿಲ್ಲ ಅಂದಿದೆ ಸಂಘಟನೆ
ಸೆ. 26ರಂದು ನಡೆಯುವ ಬೆಂಗಳೂರು ಬಂದ್ ಗೆ ಬಿಎಂಟಿಸಿ ಹಾಗೂ KSRTC ನೌಕರರು ಬೆಂಬಲ ಕೊಡುತ್ತಾರೆ ಎಂದು ಕರ್ನಾಟಕ ಸಾರಿಗೆ ನಿಗಮಗಳ ನೌಕರರ ಕೂಟದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ನಾವು ಹಾಗೂ ಸಮಾನ ಮನಸ್ಕರ ವೇದಿಕೆ ಹಾಗೂ ಬಿಎಂಟಿಸಿ ನೌಕರರ ಸಂಘಗಳು ತೀರ್ಮಾನ ಮಾಡಿದ್ದೇವೆ. ಯಾವ ವಾಹನಗಳನ್ನು ರಸ್ತೆಗೆ ಇಳಿಸಬೇಡಿ ಅಂತ ನಾವು ಸೂಚನೆ ಕೊಟ್ಟಿದ್ದೇವೆ. ಈ ಹಿಂದೆಯೂ ನಾವು ಬೆಂಬಲ ಕೊಟ್ಟಿದ್ದೆವು, ನಾಳೆಯೂ ಬೆಂಬಲ ಕೊಡುತ್ತೇವೆ ಎಂದಿದ್ದಾರೆ ನಾಗರಾಜ್.
ಸೆ. 26ರ ಬಂದ್‌ನಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗಿ ಆಗುವಂತೆ ಕರೆ ಕೊಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ. ಶಾಂತಿಯುತ ಹೋರಾಟಕ್ಕೆ ನಾವು ಒಟ್ಟು ಕೊಡುತ್ತೇವೆ, ಅಹಿತಕರ ಘಟನೆ ಆಸ್ಪದ ಕೊಡಲ್ಲ. ಇದರಲ್ಲಿ ನಮ್ಮ ನೌಕರರನ್ನು ವಿಭಜನೆ ಮಾಡಿ ನೋಡುವ ಅಗತ್ಯ ಇಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: Cauvery water dispute : ನಾಳೆ ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಹಾಗಿದ್ದರೆ ಸೆ. 26ರ ಬೆಂಗಳೂರು ಬಂದ್‌ನಲ್ಲಿ ಏನಿರುತ್ತದೆ? ಏನಿರುವುದಿಲ್ಲ?
ಏನೇನು ಇರುವುದಿಲ್ಲ?
-ಶಾಲೆ, ಕಾಲೇಜುಗಳು ಬಂದ್: ಪರೀಕ್ಷೆಗಳು ಕೂಡಾ ಮುಂದಕ್ಕೆ
-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಬಹುತೇಕ ಇರುವುದಿಲ್ಲ
– ಓಲಾ, ಊಬರ್ ಹೊರತಾದ ಆಟೋ ರಿಕ್ಷಾಗಳು ಡೌಟ್
– ಸಿನಿಮಾ ಥಿಯೇಟರ್‌ಗಳು ಬಂದ್
– ಖಾಸಗಿ ಬಸ್‌ಗಳು, ಗೂಡ್ಸ್ ವಾಹನಗಳು
-ಸೂಪರ್ ಮಾರ್ಕೆಟ್, ಮಾಲ್‌ಗಳು
– ಬಹುತೇಕ ಅಂಗಡಿಗಳು ಬಂದ್
– ಕೈಗಾರಿಕೆಗಳು
– ಜುವೆಲ್ಲರಿ ಶಾಪ್‌ಗಳು
– ಬಿಬಿಎಂಪಿ ಕಾರ್ಮಿಕರು, ನೌಕರರು ಕೆಲಸ ಮಾಡಲ್ಲ
ಏನೇನು ಸೇವೆಗಳು ಲಭ್ಯ ಇರುತ್ತವೆ?
– ತುರ್ತು ಅಗತ್ಯದ ಎಲ್ಲ ಸೇವೆಗಳು ಇರುತ್ತವೆ.
– ಹಾಲಿನ ಬೂತ್ ಓಪನ್, ಪತ್ರಿಕೆಗಳು ಸಿಗುತ್ತವೆ
– ನಗರದಲ್ಲಿ ಹೋಟೆಲ್‌ಗಳು ತೆರೆದಿರುತ್ತವೆ.
– ಓಲಾ ಮತ್ತು ಊಬರ್ ಟ್ಯಾಕ್ಸಿಗಳು ಓಡಾಡುತ್ತವೆ
– ಹೆಚ್ಚಿನ ಆಟೋಗಳು ಓಡಾಡುತ್ತವೆ.
– ಆಸ್ಪತ್ರೆ, ಮೆಡಿಕಲ್‌ಗಳ ಸೇವೆ ಯಥಾಸ್ಥಿತಿ
– ಸರ್ಕಾರಿ ಕಚೇರಿಗಳು ಇರುತ್ತವೆ, ಜನ ಕಡಿಮೆ ಇರಬಹುದು
– ಆಂಬ್ಯುಲೆನ್ಸ್ ಸೇವೆಗಳು ಸಿಗುತ್ತವೆ.
– ಮೆಟ್ರೋ ಸೇವೆ ಎಂದಿನಂತೆ ಇರುತ್ತದೆ.
ಬಲವಂತವಾಗಿ ಬಂದ್ ಮಾಡುವಂತಿಲ್ಲ
ಸುಪ್ರೀಂಕೋರ್ಟ್ ತೀರ್ಪಿನಂತೆ ಬಂದ್ ಎಂಬ ಪದವೇ ಇಲ್ಲ. ಪ್ರತಿಭಟನೆಗೆ ಮಾತ್ರ ಅವಕಾಶ. ಬೆಂಗಳೂರು ಬಂದ್ ವೇಳೆ ಯಾರೂ ಯಾವುದೇ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ, ವಾಹನಗಳನ್ನು ತಡೆಯುವಂತಿಲ್ಲ. ಹಾಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಬಂದ್‌ನಿಂದಾಗಿ ಆಸ್ತಿಪಾಸ್ತಿಗೆ ಹಾನಿ ಉಂಟಾದರೆ ಸಂಘಟಕರಿಂದಲೇ ವಸೂಲಿ ಮಾಡಲಾಗುವುದು.