Site icon Vistara News

Bangalore Bandh: ಕಾವೇರಿ ನೀರು ಬಿಡದಂತೆ ಸುಗ್ರೀವಾಜ್ಞೆ; ಸರ್ಕಾರಕ್ಕೆ ಹೋರಾಟಗಾರರಿಂದ ಮೂರು ದಿನ ಗಡುವು

Cauvery Bangalore Bandh

ಬೆಂಗಳೂರು: ಒಂದು ದಿನದ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (karnataka Jala Samrakshana Samiti) ಇದೀಗ ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿದೆ ಮತ್ತು ಅದನ್ನ ಮೂರು ದಿನದಲ್ಲಿ ಈಡೇರಿಸಬೇಕು ಎಂದು ಆಗ್ರಹಿಸಲಾಗಿದೆ.

ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಿಗದಿಯಾಗಿರುವ ಈ ಬಂದ್‌ನ ಭಾಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಆಗಮಿಸಿದರು. ಈ ವೇಳೆ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸುವ ವಿಚಾರದಲ್ಲಿ ವಿಧಾನಸಭಾ ಅಧಿವೇಶನವನ್ನು (Assembly Session) ಕರೆದು ಸುಗ್ರೀವಾಜ್ಞೆ ಹೊರಡಿಸಬೇಕು ಎನ್ನುವುದು ಸಮಿತಿಯ ಪ್ರಮುಖ ಬೇಡಿಕೆಯಾಗಿತ್ತು. ಅದರ ಬಗ್ಗೆ ಪರಿಶೀಲಿಸುವ ಭರವಸೆಯನ್ನು ರಾಮಲಿಂಗಾ ರೆಡ್ಡಿ ನೀಡಿದರು. ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಮಾತುಕತೆಯ ಬಳಿಕ ಬಂದ್‌ನ ಕಾವು ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ.

ಬಂದ್‌ಗೆ ಬೆಂಬಲ ನೀಡಿದ ಬೆಂಗಳೂರಿನ ಜನತೆ

ಕುರುಬೂರು ಶಾಂತ ಕುಮಾರ್‌ ಮತ್ತು ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಜಲಸಂರಕ್ಷಣಾ ಸಮಿತಿಯ ಅಡಿಯಲ್ಲಿ ನೀಡಲಾಗಿದ್ದ ಬಂದ್‌ ಕರೆ ಬಹುತೇಕ ಯಶಸ್ವಿಯಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು.

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಸಂಚಾರ ವಿರಳವಾಗಿ ಇತ್ತಾದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು. ಮೆಟ್ರೋ ರೈಲುಗಳು ಓಡಾಡಿದರೂ ಪ್ರಯಾಣಿಕರು ಕಡಿಮೆ ಇದ್ದರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ 13 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿತ್ತು.

ಎಲ್ಲ ಕಡೆ ಬಂಧಿತರಾದ ಪ್ರತಿಭಟನಾಕಾರರನ್ನು ಪ್ರಧಾನ ಪ್ರತಿಭಟನೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್‌ಗೆ ಕರೆತರಲಾಗಿತ್ತು. ಅದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಹಂತದಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದರು.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬೇಡಿಕೆಗಳ ಪಟ್ಟಿ ಹೊತ್ತ ಮನವಿಯನ್ನು ಸಲ್ಲಿಸಲಾಯಿತು. ಅವುಗಳನ್ನು ಪರಿಶೀಲಿಸಿದ ರಾಮ ಲಿಂಗಾರೆಡ್ಡಿ ಅವರು ಬೇಡಿಕೆಗಳ ಬಗ್ಗೆ ಸರ್ಕಾರ ಅಭಿಪ್ರಾಯವನ್ನು ತಿಳಿಸಿದರು.

ಜಲ ಸಂರಕ್ಷಣಾ ಸಮಿತಿ ಸಲ್ಲಿಸಿದ ಮನವಿ ಪತ್ರದಲ್ಲಿ ಹಲವು ಬೇಡಿಕೆ

  1. ಕೂಡಲೇ ತಮಿಳುನಾಡಿಗೆ ಹರಿಸುತ್ತಿರೋ ನೀರನ್ನು ನಿಲ್ಲಿಸಬೇಕು.
  2. ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆದು ನೀರು ಬಿಡದಿರಲು ಸುಗ್ರೀವಾಜ್ಞೆ ಹೊರಡಿಸಿ, ನೀಡು ಬಿಡಲು ಸಾಧ್ಯವಿಲ್ಲ ಎಂದು ಎಂದು ಕೇಂದ್ರಕ್ಕೆ ಮನವಿ ಮಾಡಬೇಕು.
  3. ರಾಜ್ಯ ಸರ್ಕಾರದ ಅನುದಾನದಲ್ಲೆ ಮೇಕೆದಾಟು ಯೋಜನೆ ಕಾರ್ಯಾರಂಭಿಸಬೇಕು.
  4. ಹೋರಾಟಗಾರರ ಮೇಲಿನ ಕೇಸ್ ಗಳನ್ನು ಹಿಂಪಡೆಯಬೇಕು.

ಬೇಡಿಕೆಗಳನ್ನು ಈಡೇರಿಸಲು ಮೂರು ದಿನದ ಗಡುವು

ಜಲ ಸಂರಕ್ಷಣಾ ಸಮಿತಿಯ ಬೇಡಿಕೆಗಳನ್ನು ಈಡೇರಿಸಲು ಮೂರು ದಿನಗಳ ಗಡುವು ನೀಡಲಾಗಿದೆ. ಒಂದು ವೇಳೆ ಮೂರು ದಿನದಲ್ಲಿ ಯಾವುದೇ ತೀರ್ಮಾನಕ್ಕೆ ಬಾರದೆ ಹೋದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸಚಿವ ರಾಮಲಿಂಗಾ ರೆಡ್ಡಿ ಅವರು ಕೊಟ್ಟ ಭರವಸೆ ಏನು?

  1. ಮೂರು ದಿನದಲ್ಲಿ ಸಿಎಂ ಅವರು ನಾಯಕರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
  2. ಹೋರಾಟಗಾರರ ಮೇಲಿನ ಕೇಸ್ ತೆಗೆದು ಹಾಕುವ ಬಗ್ಗೆ ಚರ್ಚೆ ಮಾಡಲಿದ್ದೇವೆ, ತೆಗೆಯುತ್ತೇವೆ.
  3. ಮೇಕೆದಾಟು ಯೋಜನೆಯನ್ನು ನಾವು ಮಾಡಬೇಕೆಂದುಕೊಂಡಿದ್ದೇವೆ, ಅದನ್ನು ಮಾಡುತ್ತೇವೆ.
  4. ಉಳಿದ ವಿಚಾರಗಳ ಬಗ್ಗೆ ಕೇಂದ್ರ ಮಧ್ಯ ಪ್ರವೇಶ ಮಾಡ್ಬೇಕು
  5. ಮಳೆ ಇಲ್ಲದ ವೇಳೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು
  6. ಚಳುವಳಿ ಸಂಧರ್ಭದಲ್ಲಿ ವಶಕ್ಕೆ ಪಡೆದ ಎಲ್ಲರನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಬಿಡುಗಡೆಗೊಳಿಸ್ತೇವೆ.

Exit mobile version