Site icon Vistara News

Bangalore Bandh: ಸು.ಕೋರ್ಟ್‌ ಗಮನ ಸೆಳೆಯಲು ಬೀದಿ ಹೋರಾಟವೇ ಬೇಕು; ಬಂದ್‌ ಸಮರ್ಥಿಸಿದ ಬೊಮ್ಮಾಯಿ

Basavara Bommai on bandh

ಬೆಂಗಳೂರು: ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ (Cauvery Dispute) ಕರ್ನಾಟಕದಲ್ಲಿ ಯಾವ ಮಟ್ಟದ ಆಕ್ರೋಶವಿದೆ ಎಂದು ಸುಪ್ರೀಂಕೋರ್ಟ್‌ಗೆ (Supreme Court) ತಿಳಿಸಬೇಕೆಂದಾದರೆ ಬೀದಿ ಹೋರಾಟ (Street agitation) ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ. ಬೆಂಗಳೂರು ಬಂದ್‌ನಲ್ಲಿ (Bangalore Bandh) ಬಿಜೆಪಿ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ಸಮರ್ಥಿಸಿದ ಅವರು, ಈ ಸರ್ಕಾರ ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶ ಸುಪ್ರೀಂ ಕೋರ್ಟ್ ಗೆ ತಲುಪಿಸಲು ಬೀದಿಗಿಳಿದು ಹೋರಾಟ ಮಾಡಲೇಬೇಕು ಎಂದರು.

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ಬೆಂಗಳೂರು ಬಂದ್ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಜನರ ಆಕ್ರೋಶ ಕಟ್ಟೆ ಒಡೆದಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಂಡತೆ ಕಾಣಿಸುತ್ತಿಲ್ಲ ಎಂದರು.

ಪ್ರತಿಭಟನೆ ಹತ್ತಿಕ್ಕುವ ಯತ್ನ ಮಾಡಿದ ಸರ್ಕಾರ

ರಾಜ್ಯದಲ್ಲಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ನಮ್ಮ ಸರ್ಕಾರ ಇದ್ದಾಗ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿರಲಿಲ್ಲ. ಮುಖ್ಯಮಂತ್ರಿಗಳು ಪ್ರತಿಭಟನೆ ಹತ್ತಿಕ್ಕುವುದಿಲ್ಲ ಅಂತ ಹೇಳಿದರು. ಆದರೆ, ಎಲ್ಲ ಕಡೆ ಪ್ರತಿಭಟನಾಕಾರರನ್ನು ಬೆಳಗ್ಗೆಯಿಂದಲೇ ಬಂಧಿಸುವ ಕೆಲಸ ಮಾಡಿದ್ದಾರೆ. ಇದರ ನಡುವೆ ಹೋರಾಟಗಾರರೂ ಯಶಸ್ವಿಯಾಗಿ ಬಂದ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ಒಗ್ಗಟ್ಟಿನ ಅಗತ್ಯ ಇತ್ತು. ಜನ ಮತ್ತು ಸಂಘಟನೆಗಳು ಒಗ್ಗಟ್ಟಿನಿಂದ ಬಂದ್ ಯಶಸ್ವಿ ಮಾಡಿವೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲೂ ಸಮಾವೇಶ ಮಾಡಲು ಬಿಟ್ಟಿದ್ದೆವು

ಕೊವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡಿದ್ದರು, ಆಗ ನಾವು ಸಮಾವೇಶ ಮಾಡಲು ಅವಕಾಶ ಕೊಟ್ಟಿದ್ದೆವು. ಈಗ ಹೊರಾಟಗಾರರು ಫ್ರೀಡಂ ಪಾರ್ಕ್ ವರೆಗೂ ಜಾಥಾ ನಡೆಸಲು ಬಿಡುತ್ತಿಲ್ಲ. ಅವರೇನು ನಿಮ್ಮ ಅಧಿಕಾರ, ನಿಮ್ಮಿಂದ ಸಹಾಯ ಕೇಳುತ್ತಿಲ್ಲ. ನಿಮ್ಮ ಸರ್ಕಾರ ಕಾವೇರಿ ಕಾಪಾಡಲು ವಿಫಲವಾಗಿದೆ‌ ಅಂತ ಗಮನ ಸೆಳೆಯಲು ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ. ಸರ್ಕಾರ ಪೊಲೀಸರ ಮೂಲಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹಾಗಿದ್ದರೆ ರೈತರು ರಾಜಕಾರಣ ಮಾಡುತ್ತಾರಾ?

ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದವರು ಕನ್ನಡ ಸಂಘದವರು ರಾಜಕಾರಣ ಮಾಡುತ್ತಾರಾ? ನಿಮ್ಮ ಒಕ್ಕೂಟದ ಸ್ನೇಹಿತರ ಹಿತ ಕಾಯುವುದನ್ನು ಬಿಟ್ಟು ರಾಜ್ಯದ ಹಿತ ಕಾಯಿರಿ ಎಂದು ಹೇಳಿದರು.

ಪ್ರಧಾನಿ ಮಧ್ಯಸ್ಥಿಕೆ ಬದಲು ಸ್ಟಾಲಿನ್‌ ಜತೆ ಮಾತನಾಡಿ

ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರ್ಕಾರದ ಮನವೊಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಇವರು ತಮಿಳುನಾಡಿಗೆ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ಥಿಕೆ ಕೇಳಿದರೆ, ಅದನ್ನು ಹೇಗೆ ಮಾಡಲು ಸಾಧ್ಯವಿದೆ‌. ತಮಿಳುನಾಡು ಇಂಡಿಯಾ ಕೂಟದಲ್ಲಿದೆ‌. ಕಾಂಗ್ರೆಸ್ ಮಿತ್ರ ಪಕ್ಷವಾಗಿದೆ. ಸೋನಿಯಾ ಗಾಂಧಿ ಖರ್ಗೆ ಅವರನ್ನು ಕರೆಯಿಸಿ ಮಾತನಾಡಿಸಲಿ. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಮಾತುಕತೆಗೆ ಒಪ್ಪಿಸಲಿ ಎಂದು ಹೇಳಿದರು.

ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದಾರೆಂದು ಕೇಳಿದ ಪ್ರಶ್ನೆಗೆ ಅವರು, ನೇರವಾಗಿ ಮಧ್ಯ ಪ್ರವೇಶ ಮಾಡಿ ಅಂತ ಹೇಳಲಿ, ಕಾವೇರಿ ಟ್ರಿಬ್ಯುನಲ್ ಆದೇಶ ಆದ ಮೇಲೆ ಸುಪ್ರೀಂ ಆದೇಶ ಆದಹಾಗೆ ಸುಪ್ರೀಂ ನಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಹಿಂದಿನ ಪ್ರಧಾನಿಗಳು ಮಧ್ಯಪ್ರವೇಶ ಮಾಡಿದ್ದರು ಎಂದು ವಿವರಿಸಿದರು.

ಡಿಸಿಎಂ ಡಿಕೆ ಶಿವಕುಮಾರ್‌ ಹಾಗೆ ಹೇಳಿದ್ಯಾಕೆ?

ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಕೆಆರ್‌ಎಸ್ ಗೆ 10 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ ಎಂದು ಹೇಳುವ ಉದ್ದೇಶವೇನಿತ್ತು? ಇವರ ಹೇಳಿಕೆಯಿಂದ ಸಿಡಬ್ಲುಆರ್ ಸಿ ಮೇಲೆ ಪರಿಣಾಮ ಬೀರುವುದಿಲ್ಲವೇ, ಇವರ ಈ ರೀತಿಯ ಹೇಳಿಕೆಯಿಂದಲೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

3000 ಕ್ಯೂಸೆಕ್‌ ನೀರು ಕೂಡಾ ಬಿಡಬಾರದು

ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಪ್ರತಿದಿನ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿದೆ. ಅವರದು ಏನೇ ಆದೇಶ ಬಂದರೂ ಕೂಡ ರಾಜ್ಯ ಸರ್ಕಾರ ಅದನ್ನು ಒಪ್ಪಬಾರದು. ತಕ್ಷಣ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಹಾಕಬೇಕು. ಕಾವೇರಿ ನೀರು ನಿಯಂತ್ರಣ ಮಂಡಳಿ ಮತ್ತು ಪ್ರಾಧಿಕಾರದ ಆದೇಶ ವೈಜ್ಞಾನಿಕವಾಗಿಲ್ಲ. ಅವರು ವಸ್ತುಸ್ಥಿತಿ ಅರಿತು ಆದೇಶ ಮಾಡಬೇಕು. ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಬೇಕು. ರಾಜ್ಯದ ನಾಯಕತ್ವ ಸರಿಯಾದ ಲೀಡ್ ತೆಗೆದುಕೊಳ್ಳಬೇಕು. ಇವರು ಹಗುರವಾಗಿ ತೆಗೆದುಕೊಂಡಿರುವದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಾವೇ ಮಧ್ಯಂತರ ಅರ್ಜಿ ಹಾಕಿದೆ ನಮ್ಮ ಪರಿಸ್ಥಿತಿ, ಅವರ ಪರಿಸ್ಥಿತಿ ಏನಿದೆ ಅಂತ ಹೇಳಲು ಹೆಚ್ಚು ಅವಕಾಶ ಇರುತ್ತದೆ ಎಂದರು.

ಇನ್ನು ರಾಜ್ಯದ ಪರ ವಾದ ಮಾಡುತ್ತಿರುವ ವಕೀಲರನ್ನು ಬದಲಾಯಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಕೀಲರ ತಂಡ ಬದಲಾವಣೆ ಮಾಡುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು, ಅವರ ನಡುವೆ ಏನು ಮಾತುಕತೆಯಾಗಿದೆಯೋ ಗೊತ್ತಿಲ್ಲ ಎಂದರು.

ಮದ್ಯದ ದರ ಹೆಚ್ಚಳದಿಂದ ಆದಾಯ ಕಡಿಮೆಯಾಗಿದೆ

ರಾಜ್ಯ ಸರ್ಕಾರ ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರಿಂದ ಅಬಕಾರಿ ಆದಾಯ ಕಡಿಮೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮದ್ಯದ ದರ ಹೆಚ್ಚಳವಾಗಿದೆ. ಹೀಗಾಗಿ ಗೋವಾ ಹಾಗೂ ಮಹಾರಾಷ್ಟ್ರದಿಂದ ಅಕ್ರಮ ಮದ್ಯ ಸರಬರಾಜಾಗುತ್ತಿದೆ ಎಂದು ಮಾಜಿ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯ ಮಾರಾಟ ಮಾಡಲು ಹೊರಟಿದ್ದು ದುರದೃಷ್ಟಕರ, ಇವರು ಮದ್ಯದ ಬೆಲೆ ಹೆಚ್ಚಳ ಮಾಡಿದ್ದರಿಂದ ಆದಾಯ ಕಡಿಮೆಯಾಗಿದೆ. ಇವರು ಗೃಹಲಕ್ಷ್ಮಿಗೆ ನೀಡಿದ ಹಣವನ್ನು ವಾಪಸ್ ಪಡೆಯಲು ಈ ಮಾರ್ಗ ಅನುಸರಿಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯ ಹದಗೆಡಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಈ ತೀರ್ಮಾನ ಹಿಂಪಡೆಯಬೇಕು. ರಾಜ್ಯದಲ್ಲಿ ದರ ಹೆಚ್ಚಳ ಮಾಡಿರುವುದರಿಂದ ಮಹಾರಾಷ್ಟ್ರ ಮತ್ತು ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ. ಇದರಿಂದ ಕುಟುಂಬಗಳು ಹಾಳಾಗುತ್ತವೆ. ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ವಿರೋಧಿಸಬೇಕು ಎಂದು ಮನವಿ ಮಾಡಿದರು.

Exit mobile version