ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಗಳ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿದೆ. ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಧಮಕಿ, ಹಣ ವಸೂಲಿ ವಿಚಾರಗಳಲ್ಲಿ ಸಿಟಿ ರೌಡಿಗಳು ಸದ್ದು ಮಾಡುತ್ತಿದ್ದಾರೆ. ದಿನೇ ದಿನೇ ನಗರ ಪೊಲೀಸ್ ಆಯುಕ್ತರಿಗೆ ದೂರು ಮೇಲೆ ದೂರುಗಳು ಬರುತ್ತಿರುವುದರಿಂದ ರೌಡಿಗಳ ಮೇಲೆ ಕಣ್ಣಿಡಲು ಕಮಿಷನರ್ ಸೂಚನೆ ನೀಡಿದ್ದಾರೆ.
ಎಂಟೂ ವಿಭಾಗಗಳ ಡಿಸಿಪಿಗಳ ಜೊತೆ ಕಮಿಷನರ್ ಮೀಟಿಂಗ್ ನಡೆಸಿದ್ದು, ರೌಡಿಗಳನ್ನು ಮಟ್ಟ ಹಾಕಲು ಖಡಕ್ ಸೂಚನೆ ನೀಡಿದ್ದಾರೆ. ಕಮಿಷನರ್ ಮೀಟಿಂಗ್ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ಪ್ರತಿಯೊಂದು ಡಿವಿಷನ್‌ನಲ್ಲಿಯೂ ಡಿಸಿಪಿಗಳ ನೇತೃತ್ವದಲ್ಲಿ ಸ್ಪೆಷಲ್ ಟೀಂಗಳ ರಚನೆ ಮಾಡಿದ್ದು ತಮ್ಮ ವಿಭಾಗದ ರೌಡಿಗಳನ್ನು ಠಾಣೆಗೆ ಕರೆಸಿ ಪ್ರತ್ಯೇಕವಾಗಿ ವಾರ್ನಿಂಗ್ ನೀಡಿದ್ದಾರೆ. ಒಂದೇ ವಾರದಲ್ಲಿ ನಗರದಲ್ಲಿ 2200ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಡಲಾಗಿದೆ.
ರೌಡಿಗಳು ಚುರುಕಾಗಲು ಹತ್ತಿರ ಬರುತ್ತಿರುವ ಚುನಾವಣೆಯೇ ಕಾರಣ. ಕೆಲವು ಕಾರ್ಪೊರೇಟರ್‌ಗಳು, ಎಂಎಲ್‌ಎಗಳು ರೌಡಿಗಳನ್ನು ಸಾಕಿಕೊಂಡಿದ್ದು, ತಮ್ಮ ಪ್ರದೇಶದಲ್ಲಿ ಹವಾ ಇಟ್ಟಿರುವಂತೆ ನೋಡಿಕೊಂಡಿದ್ದಾರೆ. ಇವರು ಭೂ ತಗಾದೆ ಪರಿಹಾರ, ಹಫ್ತಾ ವಸೂಲಿ, ಮೀಟರ್ ಬಡ್ಡಿ ಹಣಕ್ಕೆ ಡಿಮ್ಯಾಂಡ್ ಇತ್ಯಾದಿ ಮಾಡುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳು ಗುಂಪುಗುಂಪಾಗಿ ಮೀಟಿಂಗ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಸದ್ಯ ಇಂಥವರನ್ನು ಗುರುತಿಸಿ ಎಚ್ಚರಿಕೆ ನೀಡಿ IPC 110 ಅಡಿಯಲ್ಲಿ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಪದೇ ಪದೆ ಹೆಸರು ಕೇಳಿದರೆ ಚುನಾವಣೆ ವೇಳೆಗೆ ಗೂಂಡಾ ಆಕ್ಟ್ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ | ಪೊಲೀಸರಿಗೆ ಪೆಪ್ಪರ್ ಸ್ಪ್ರೇ, ಹಲ್ಲೆ ಮಾಡಿ ರೌಡಿಶೀಟರ್ ಎಸ್ಕೇಪ್; ಹಿಡಿಯಲು ಯತ್ನಿಸಿದ ಕಾನ್‌ಸ್ಟೆಬಲ್‌ಗೆ ಡ್ಯಾಗರ್‌ನಿಂದ ಇರಿತ