ಬೆಂಗಳೂರು: ಇದು ಬೆಂಗಳೂರಿನ ಡೆಲಿವರಿ ಬಾಯ್‌ಗಳು ನೋಡಬೇಕಾದ ಸ್ಟೋರಿ. ಬೆಂಗಳೂರಿನಲ್ಲಿ ಖತರ್ನಾಕ್ ಮೊಬೈಲ್ ಸುಲಿಗೆಕೋರರನ್ನು (Mobile Snatching) ಬಂಧಿಸಲಾಗಿದ್ದು, ಹೊಟ್ಟೆಪಾಡಿಗಾಗಿ ರಾತ್ರಿ ವೇಳೆ ಓಡಾಡಿ ಡೆಲಿವರಿ ಮಾಡುವ ಹುಡುಗರೇ (delivery boys) ಇವರ ಜಾಲದ ಟಾರ್ಗೆಟ್ ಆಗಿರುವುದು ಬಹಿರಂಗವಾಗಿದೆ.
ರಾತ್ರಿ ವೇಳೆ ಡೆಲಿವರಿ ಬಾಯ್‌ಗಳ ಮೊಬೈಲ್‌ಗಳನ್ನು ಸುಲಿಗೆ ಮಾಡುವ ಈ ಆರೋಪಿಗಳು, ಮೊಬೈಲ್ ಕಸಿಯಲು ಸುಲಭ ವಿಧಾನ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಡೆಲಿವರಿ ಬಾಯ್‌ಗಳು ರೂಟ್ ಮ್ಯಾಪ್ ನೋಡಲು ಯುಲು(yulu)ನಂತಹ ಸಣ್ಣ ಎಲೆಕ್ಟ್ರಿಕ್ ಬೈಕ್‌ಗಳ ಮುಂದೆ ಕ್ಲಿಪ್ ಹಾಕಿ ಮೊಬೈಲ್ ಸಿಕ್ಕಿಸಿಕೊಳ್ಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಆರೋಪಿಗಳು ಡೆಲಿವರಿ ಬಾಯ್‌ಗಳನ್ನು ಫಾಲೋ ಮಾಡುತ್ತಾರೆ. ಕ್ಷಣಾರ್ಧದಲ್ಲಿ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗುತ್ತಾರೆ.
ಹೀಗೆ ಮೊಬೈಲ್ ಸುಲಿಗೆ ಮಾಡುತ್ತಿದ್ದ ಅಸ್ಸಾಂ ಮೂಲದ ರಾಕೇಶ್ ಹಾಗೂ ಮಲ್ಲಿಕ್ ಎಂಬವರನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರು ಡೆಲಿವರಿ ಬಾಯ್‌ಗಳ ಮೊಬೈಲ್ ಸುಲಿಗೆ ಮಾಡಿದ್ದರು. ಸುಲಿಗೆ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಡಂಜೋ ಡೆಲಿವರಿ ಬಾಯ್ ಒಬ್ಬ ಕೈ ಮುರಿದುಕೊಂಡಿದ್ದ. ನಂತರ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನ ಮಾಡಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಬರೋಬ್ಬರಿ 32 ಮೊಬೈಲ್ ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಸದ್ಯ 25 ಮೊಬೈಲ್ ರಿಕವರಿ ಮಾಡಲಾಗಿದೆ. ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ: Honey Trap: ಕಿರುತೆರೆ ನಟಿಯ ‘ಹನಿಟ್ರ್ಯಾಪ್’ನಲ್ಲಿ 75ರ ವೃದ್ಧ ವಿಲವಿಲ, 11 ಲಕ್ಷ ರೂ. ಸುಲಿಗೆ!